
ಮುಂಬೈ: ಬರ ಮತ್ತು ಸಾಲಬಾಧೆಯಿಂದ ತೀವ್ರ ನೊಂದಿದ್ದ ರೈತನೋರ್ವ ತನ್ನ ಅಂತ್ಯಸಂಸ್ಕಾರಕ್ಕೆ ಊರಿಗೆಲ್ಲಾ ಆಹ್ವಾನ ನೀಡಿ ಬಳಿಕ ನೇಣಿಗೆ ಶರಣಾದ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಮರಾಠವಾಡ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಶೇಷರಾವ್ ಷೆಜುಲ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಶೇಷರಾವ್ ತನ್ನ ಗ್ರಾಮದವರಿಗೆಲ್ಲಾ ತಾನು ಸಾಯುತ್ತಿದ್ದೇನೆ. ನನ್ನ ಅಂತ್ಯ ಸಂಸ್ಕಾರಕ್ಕೆ ತಪ್ಪದೇ ಬನ್ನಿ ಎಂದು ಆಹ್ವಾನ ನೀಡಿದ್ದನಂತೆ. ಆದರೆ ಶೇಷರಾವ್ ನ ಮಾತುಗಳನ್ನು ತಮಾಷೆಯಾಗಿ ತೆಗೆದುಕೊಂಡ ಗ್ರಾಮಸ್ಥರು, ಆತನ ಮಾತುಗಳನ್ನು ಗಂಭೀರವಾಗಿ ಪರಿಗಣಸಲೇ ಇಲ್ಲ. ಆದರೆ ಮಾರನೆಯ ದಿನ ಶೇಷರಾವ್ ತನ್ನದೇ ತೋಟದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶೇಷರಾವ್ ಬಳಿ ಸುಮಾರು 2 ಎಕರೆ ಜಮೀನಿದ್ದು, ಅದರಲ್ಲಿ ಆತ ಸೊಯಾಬಿನ್ ಬೆಳೆಯನ್ನು ಬೆಳೆದಿದ್ದ. ಆದರೆ ಮರಾಠವಾಡ ಪ್ರಾಂತ್ಯದಲ್ಲಿ ಬರಗಾಲವಿದ್ದರಿಂದ ಮಳೆ ಬಾರದೇ ಬೆಳೆ ಕೈತಪ್ಪಿತ್ತು. ಇದಲ್ಲದೆ ಶೇಷರಾವ್ ಗೆ ಸುಮಾರು 80 ಸಾವಿರ ರು.ಗಳಷ್ಟು ಕೈಸಾಲವಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ತನ್ನ ಮಗಳಿಗೆ ಮದುವೆ ಮಾಡಲು ನಿರ್ಧರಿಸಿದ್ದ. ಸೊಯಾಬಿನ್ ಬೆಳೆ ಚೆನ್ನಾಗಿ ಬಂದರೆ ಅದನ್ನು ಮಾರಿ ಸಾಲ ತೀರಿಸಬೇಕು. ಬಳಿಕ ತನ್ನ ಮಗಳ ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದನಂತೆ. ಆದರೆ ಬೆಳೆ ನಷ್ಟದಿಂದ ತೀವ್ರ ನೊಂದಿದ್ದ ಶೇಷರಾವ್ ಗ್ರಾಮಸ್ಥರಿಗೆಲ್ಲಾ ಆಹ್ವಾನ ನೀಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರೈತ ಶೇಷಗಿರಿ ರಾವ್ ಆತ್ಮಹತ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಿವಸೇನಾ, ಶೇಷಗಿರಿ ರಾವ್ ನಂತಹ ರೈತರ ಆತ್ಮಹತ್ಯೆ ಸರಣಿ ಮುಂದುವರೆದರೆ ತನ್ನ ಮುಖವಾಣಿ ಸಾಮ್ನಾದಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಕೇಂದ್ರೀಕರಿಸ ಲೇಖನ ಬರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಒಟ್ಟಾರೆ ಸಾಲಾಬಾಧೆಗೆ ಮತ್ತೋರ್ವ ರೈತನ ಬಲಿಯಾಗಿದ್ದು, ರೈತರ ಸರಣಿ ಆತ್ಮಹತ್ಯೆಗೆ ಮತ್ತೊಂದು ಸೇರ್ಪಡೆಯಾಗಿದೆ.
Advertisement