ತಿರುವನಂತಪುರ: ಕೇರಳ ಅಬಕಾರಿ ಸಚಿವ ಕೆ. ಬಾಬು ಅವರು ಬಾರ್ ಲಂಚ ಪ್ರಕರಣದ ಸಂಬಂಧ ಸಚಿವ ಸ್ಥಾನಕ್ಕೆ ನೀಡಿದ್ದ ರಾಜಿನಾಮೆಯನ್ನು ಶನಿವಾರ ಹಿಂಪಡೆದಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಯುಡಿಎಫ್) ಬಾಬು ಅವರ ರಾಜಿನಾಮೆಯನ್ನು ಅಂಗೀಕರಿಸದಿರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಅವರು ಇಂದು ತಮ್ಮ ರಾಜಿನಾಮೆಯನ್ನು ವಾಪಸ್ ಪಡೆಯಲು ನಿರ್ಧಿಸಿದ್ದಾರೆ.
ಮುಖ್ಯಮಂತ್ರಿ ಒಮನ್ ಚಾಂಡಿ ಅವರ ಅಧಿಕೃತ ನಿವಾಸ ‘ಕ್ಲಿಫ್ ಹೌಸ್’ನಲ್ಲಿ ನಡೆದ ಯುಡಿಎಫ್ ಸಭೆಯಲ್ಲಿ ಬಾಬು ಅವರ ರಾಜಿನಾಮೆಯನ್ನು ಅಂಗೀಕರಿಸದಿರಲು ನಿರ್ಧರಿಸಲಾಯಿತು.
ಬಾರ್ ಲಂಚ ಪ್ರಕರಣದಲ್ಲಿ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸುವಂತೆ ತ್ರಿಶ್ಯೂರ್ ವಿಚಕ್ಷಣಾ ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬಾಬು ಅವರು ಕಳೆದ ವಾರ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಬು ಅವರು, ವೈಯಕ್ತಿಕವಾಗಿ ಮತ್ತೆ ಸಂಪುಟಕ್ಕೆ ಮರಳಲು ನನಗೆ ಆಸಕ್ತಿ ಇಲ್ಲ. ಆದರೆ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ರಾಜಿನಾಮೆ ಹಿಂಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.