ಮತಾಂತರಕ್ಕೆ ಯತ್ನಿಸಿದವನಿಗೆ ಚಪ್ಪಲಿ ಹಾರ, ಕತ್ತೆ ಮೇಲೆ ಮೆರವಣಿಗೆ

ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಥಳಿಸಿ ಚಪ್ಪಲಿ ಹಾರ ಹಾಕಿ ಕತ್ತೆ ಮೇಲೆ ಮೆರವಣಿಗೆ ಮಾಡಿದ ಘಟನೆ ಶನಿವಾರ ಉತ್ತರ ಪ್ರದೇಶದಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾನ್ಪುರ: ಮತಾಂತರಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಥಳಿಸಿ ಚಪ್ಪಲಿ ಹಾರ ಹಾಕಿ ಕತ್ತೆ ಮೇಲೆ ಮೆರವಣಿಗೆ ಮಾಡಿದ ಘಟನೆ ಶನಿವಾರ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಜಲಾನ್ ಜಿಲ್ಲೆಯ ರಂದಾರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಪ್ಪಿಗೆ ಇಲ್ಲದೇ ಸಂಗಮ್ ಜಾತವ್ ಎಂಬಾತನನ್ನು ಮತಾಂತರ ಮಾಡಿದ ಆರೋಪದ ಮೇಲೆ ಭಜರಂಗ  ದಳ ಕಾರ್ಯಕರ್ತರು ವ್ಯಕ್ತಿಯೊಬ್ಬನನ್ನು ತೀವ್ರವಾಗಿ ಥಳಿಸಿದ್ದಾರೆ. ಆರೋಪಿ ವ್ಯಕ್ತಿಯ ತಲೆ ಬೋಳಿಸಿ, ಆತನಿಗೆ ಚಪ್ಪಲಿ ಹಾರ ಹಾಕಿ ಬಳಿಕ ಕತ್ತೆಯ ಮೇಲೆ ಕೂರಿಸಿ ಊರ ತುಂಬ ಮೆರವಣಿಗೆ  ಮಾಡಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಅವಧೇಶ ಸವಿತ ಎಂಬಾತ ಸ್ಥಳೀಯ ಗ್ರಾಮಸ್ಥ ಸಂಗಮ್ ಜಾತವ್ ಎಂಬಾತನಿಗೆ ಕೆಲಸ ಕೊಡಿಸುವುದಾಗಿ ಹೇಳಿ ಮಿರ್ಜಾಪುರದ ಕಚ್ವಾ ಗ್ರಾಮದ  ಚರ್ಚ್ ಗೆ ಕರೆದೊಯ್ದಿದ್ದಾನೆ. ಅಲ್ಲಿ ಆತನನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾನೆ. ಆದರೆ ಜಾತವ್ ಆತನ ಮಾತು ಕೇಳದೇ ಹೇಗೋ ಅಲ್ಲಿಂದ  ತಪ್ಪಿಸಿಕೊಂಡು ತನ್ನ ಗ್ರಾಮಕ್ಕೆ ಬಂದು ಹಿರಿಯರಿಗೆ ವಿಚಾರ ತಿಳಿಸಿದ್ದಾನೆ.  ಜಾತವ್ ಈ ಘಟನೆಯನ್ನು ಹೇಳಿದ ಬಳಿಕ ಭಜರಂಗದಳದ ಕಾರ್ಯಕರ್ತರು ಆರೋಪಿ ಅವಧೇಶ ಮನೆಗೆ ನುಗ್ಗಿ  ಆತನನ್ನು ಥಳಿಸಿ ಬಳಿಕ ತಲೆ ಬೋಳಿಸಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೂವರನ್ನು ಮತಾಂತರ ಮಾಡಿಸಿದ್ದ ಅವದೇಶ್?
ಇದಕ್ಕೂ ಮೊದಲ ಅವದೇಶ್ ಇದೇ ಚರ್ಚ್ ನಲ್ಲಿ ಮೂವರು ಹಿಂದುಗಳನ್ನು ಮತಾಂತರ ಮಾಡಿಸಿ ಅವರಿಂದ ಗೋಮಾಂಸ ಭಕ್ಷಣೆ ಕೂಡ ಮಾಡಿಸಿದ್ದ ಎಂದು ಭಜರಂಗ ದಳ ಕಾರ್ಯಕರ್ತರು  ಆರೋಪಿಸಿದ್ದಾರೆ.

ಪ್ರಸ್ತುತ ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಆರೋಪಿ ಅವಧೇಶನನ್ನು ವಶಕ್ಕೆ ಪಡೆದಿದ್ದು, ಆತನ ಮೇಲೆ ಹಲ್ಲೆ ಮಾಡಿದ ಮೂವರು ಭಜರಂಗ ದಳ ಕಾರ್ಯಕರ್ತರನ್ನು ಕೂಡ ಬಂಧಿಸಿ  ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com