

ಹೈದರಾಬಾದ್: ತೆಲಂಗಾಣದಲ್ಲಿ ಮಹಿಳೆ ಮತ್ತು ಬಾಲಕಿಯರ ಮೇಲೆ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು, ಕೃಷಿ ಕೆಲಸ ನಿಮಿತ್ತ ಹೊಲದತ್ತ ಹೋಗುತ್ತಿದ್ದ 14 ವರ್ಷದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದ ಮೂರು ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಅತ್ಯಾಚಾರವನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ 3 ತಿಂಗಳ ಹಿಂದೆಯೇ ಪ್ರಕರಣ ನಡೆದಿದ್ದು, ಅದಿಲಾಬಾದ್ ಜಿಲ್ಲೆಯ ಚಿನ್ನ ರಾಜೂರಾ ಗ್ರಾಮದಲ್ಲಿ ಕೃಷಿ ಕೆಲಸಕ್ಕೆ ತನ್ನ ಸಂಬಂಧಿಯೊಂದಿಗೆ ಹೊಲಕ್ಕೆ ತೆರಳುತ್ತಿದ್ದ 14 ವರ್ಷದ ಬಾಲಕಿಯನ್ನು ಆಟೋದಲ್ಲಿ ಬಂದ ಎಂ ರಾಜು, ಸೈಯದ್ ಮತೀನ್, ರಂಜಿತ್ ಆರ್ ಎಂಬ ದುಷ್ಕರ್ಮಿಗಳು ಮಾರ್ಗ ಮಧ್ಯೆ ಬಾಲಕಿ ಮತ್ತು ಆಕೆಯ ಸಹೋದರ ಸಂಬಂಧಿಯನ್ನು ಬಲವಂತವಾಗಿ ಆಟೋ ಒಳಗೆ ಕೂರಿಸಿಕೊಂಡು ಹೋಗಿದ್ದಾರೆ. ಬಳಿಕ ಮಾರ್ಗ ಮಧ್ಯೆ ಸಹೋದರ ಸಂಬಂಧಿ ಮಲ್ಲೇಶ್ ಎಂಬಾತನ್ನು ಚಲಿಸುತ್ತಿದ್ದ ಆಟೋದಿಂದ ಕೆಳಕ್ಕೆ ಬಿಸಾಡಿದ್ದು, ಬಳಿಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅತ್ಯಾಚಾರದ ವೇಳೆ ರಾಜು ಎಂಬಾತ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದು, ಬಳಿಕ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಕೊಂದು ಹಾಕುವುದಾಗಿ ಬೆದರಿಸಿದ್ದಾರೆ. ಇದರಿಂದ ಭಯಬೀತಗೊಂಡ ಬಾಲಕಿ ಯಾರಿಗೂ ವಿಚಾರ ಹೇಳಿರುವುದಿಲ್ಲ. ಆದರೆ ಬಳಿಕ ತನ್ನ ಮೇಲೆ ನಡೆದ ದೌರ್ಜನ್ಯದಿಂದ ಬಾಲಕಿ ಮಾನಸಿಕವಾಗಿ ನರಕ ಯಾತನೆ ಅನುಭವಿಸಿದ್ದು, ಬಾಲಕಿಯ ನರಳಾಟ ಗಮನಿಸಿದ ಪೋಷಕರು ವಿಚಾರಿಸಿದ್ದಾರೆ. ಆಗ ಬಾಲಕಿ ನಡೆದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ.
ಬಳಿಕ ಗ್ರಾಮದ ಹಿರಿಯರನ್ನು ಸಂಪರ್ಕಿಸಿದ ಪೋಷಕರು ಅವರ ಸಲಹೆಯಂತೆ ಕೂಡಲೇ ಪೋಷಕರು ಪೊಲೀಸರ ಬಳಿ ವಿಚಾರ ತಿಳಿಸಿದ್ದಾರೆ. ದೂರು ಪಡೆದ ಪೊಲೀಸರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿತ ಕಾಮುರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಸಿಫಾಬಾದ್ ಸಬ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ಅವರು ಹೇಳಿದ್ದಾರೆ.
ಪ್ರಸ್ತುತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಡಿ) ಅಡಿಯಲ್ಲಿ ಮತ್ತು ಪೋಸ್ಕೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement