ಸ್ವಾತಿ ಕೊಲೆ ಆರೋಪಿ ಗುರುತು ಪತ್ತೆ ಹಚ್ಚಿದ ಅಂಗಡಿ ಮಾಲೀಕ

ಇನ್ ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ತನಿಖೆ ನಡೆಯುತ್ತಿದ್ದು, ಆರೋಪಿ ರಾಮ್ ಕುಮಾರ್ ಗುರುತು ಪತ್ತೆಗೆ ಇಂದು ಫುಝ್ಹಲ್ ಕೇಂದ್ರೀಯ ಕಾರಾಗೃಹದಲ್ಲಿ ಪರೇಡ್
ಆರೋಪಿ ರಾಮ್ ಕುಮಾರ್
ಆರೋಪಿ ರಾಮ್ ಕುಮಾರ್

ಚೆನ್ನೈ: ಇನ್ ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ತನಿಖೆ ನಡೆಯುತ್ತಿದ್ದು, ಆರೋಪಿ ರಾಮ್ ಕುಮಾರ್ ಗುರುತು ಪತ್ತೆಗೆ ಇಂದು ಫುಝ್ಹಲ್ ಕೇಂದ್ರೀಯ ಕಾರಾಗೃಹದಲ್ಲಿ ಪರೇಡ್ ನಡೆಸಲಾಯಿತು.

ಇಂದು ಬೆಳಗ್ಗೆ ಸುಮಾರು 1 ಗಂಟೆಗಳ ಕಾಲ ಪರೇಡ್ ನಡೆಸಲಾಯಿತು. ನುಂಗಬಾಕಂ ರೈಲ್ವೆ ನಿಲ್ದಾಣದಲ್ಲಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಪ್ರಕರಣದ ಪ್ರತ್ಯಕ್ಷ ದರ್ಶಿಯಾಗಿದ್ದಾರೆ. ಜೂನ್ 24 ರಂದು ನಡೆದ ಸ್ವಾತಿ ಕೊಲೆಯ ಸಾಕ್ಷಿಯನ್ನಾಗಿ ಪೊಲೀಸರು ಇವರನ್ನು ಪರಿಗಣಿಸಿದ್ದು, ಇಂದು ಬೆಳಗ್ಗೆಯೇ ಗುರುತು ಪತ್ತೆ ಹಚ್ಚುವ ಕೆಲಸ ನಡೆಯಿತು.

ಆರೋಪಿ ರಾಮ್ ಕುಮಾರ್ ಸೇರಿದಂತೆ ಸುಮಾರು 25 ಮಂದಿಯನ್ನು ಸಾಲಾಗಿ ನಿಲ್ಲಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪರೇಡ್ ನಡೆಸಲಾಯಿತು. ಸ್ವಾತಿ ತಂದೆ ಸಂತನಾ ಮತ್ತು ಅಂಗಡಿ ಮಾಲೀಕ ಶಿವಕುಮಾರ್ ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ.

ಯಾವುದೇ ಅಪರಾಧ ಪ್ರಕರಣದ ಪ್ರಮುಖ ಹಂತ ಇದೇ ಆಗಿರುತ್ತದೆ. ಒಂದೇ ರೀತಿ ಹೋಲಿಕೆಯುಳ್ಳು ಸುಮಾರು 10 ಮಂದಿಯನ್ನು ಆರೋಪಿ ಜೊತೆ ಸಾಲಾಗಿ ನಿಲ್ಲಿಸಲಾಗುತ್ತದೆ. ಈ ವೇಳೆ ಪ್ರತ್ಯಕ್ಷ ದರ್ಶಿಯನ್ನು ಆರೋಪಿಯನ್ನು ಗುರುತು ಹಿಡಿಯುವಂತೆ ಕೇಳಲಾಗುತ್ತದೆ. ಅಪರಾಧ ನಡೆದ ಸ್ಥಳದಲ್ಲಿ ಇದ್ದ ಆರೋಪಿಯನ್ನು ಪ್ರತ್ಯಕ್ಷ ದರ್ಶಿಗಳು ಗುರುತು ಹಿಡಿಯಬೇಕಾಗುತ್ತದೆ.

ತನಿಖಾಧಿಕಾರಿಯ ಮನವಿ ಮೇರೆಗೆ ಜಿಲ್ಲಾ ಮುಖ್ಯ ನ್ಯಾಯಾದೀಶರ ಸಮ್ಮುಖದಲ್ಲಿ ಈ ಕೆಲಸ ಮಾಡಲಾಗುತ್ತದೆ. ಪರೇಡ್ ನ ಎಲ್ಲಾ ಪ್ರಕ್ರಿಯೆಗಳನ್ನು ನ್ಯಾಯಾಧೀಶರು ದಾಖಲಿಸಿಕೊಳ್ಳುತ್ತಾರೆ, ಇದು ವಿಚಾರಣೆಗೆ ಪ್ರಮುಖ ಸಾಕ್ಷಿಯೂ ಕೂಡ ಆಗುತ್ತದೆ.

ತನಿಖಾಧಿಕಾರಿಗಳ ಮನವಿ ಮೇರೆಗೆ ಕಾರಾಗೃಹ ಅಧಿಕಾರಿಗಳು ಆರೋಪಿಯನ್ನೇ ಹೋಲುವ ಸುಮಾರು 5 ರಿಂದ 10 ಸಹ ಕೈದಿಗಳನ್ನು ಪರೇಡ್ ನಲ್ಲಿ ಭಾಗವಹಿಸಲು ಸೂಚಿಸುತ್ತಾರೆ.

ಪರೇಡ್ ನಡೆಸುವುದಕ್ಕೂ ಮುನ್ನ ಆರೋಪಿಯ ಭಾವಚಿತ್ರವನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ನೀಡಬಾರದು ಎಂದು ಈ ಹಿಂದೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿತ್ತು. ಮಾಧ್ಯಮಗಳಲ್ಲಿ ಪ್ರಸಾರವಾಗುವ ಆರೋಪಿ ಭಾವಚಿತ್ರ ಪ್ರತ್ಯಕ್ಷ ದರ್ಶಿಯ ಸ್ಮರಣಾ ಶಕ್ತಿಯ ಮೇಲೆ ಪರಿಣಾ ಬೀರಬಹುದು. ಹೀಗಾಗಿ ಗುರುತು ಪತ್ತೆ ಹಚ್ಚುವ ಪರೇಡ್ ನಡೆಸುವ ವರೆಗೂ ಆರೋಪಿಯ ಚಿತ್ರ ಬಡಿುಗಡೆ ಮಾಡದಂತೆ ಕಟ್ಟು ನಿಟ್ಟಾಗಿ ಸೂಚಿಸಿತ್ತು.

ಆದರೆ ಈ ಕೇಸ್ ನಲ್ಲಿ ಬೇರೆಯದ್ಧೇ ಘಟನೆ ನಡೆಯಿತು. ತಿರುವೇನೆಲ್ಲಿ ಜಿಲ್ಲೆಯ ಮೀನಾಕ್ಷಿಪುರಂ ನಲ್ಲಿ  ಪೊಲೀಸರು ಆತನನ್ನು ಸುತ್ತುವರಿದಾಗ ಆತ ತನ್ನ ಕುತ್ತಿಗೆಯನ್ನು ಸೀಳಿಕೊಳ್ಳಲು ಯತ್ನಿಸಿದ. ಈ ವೇಳೆ ಆರೋಪಿ ಆತನೇ ಎಂಬುದು ಖಚಿತವಾಗಿ ಎಲ್ಲಾ ಮಾಧ್ಯಮಗಳಲ್ಲೂ ಆತನ ಭಾವಚಿತ್ರ ಪರೇಡ್ಗೂ ಮುನ್ನವೇ ಪ್ರಕಟಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com