
ಧನಬಾದ್: ಬಿಹಾರ ಸಾಮೂಹಿಕ ನಕಲು ಪರೀಕ್ಷಾ ಅಕ್ರಮ ಬಯಲಿಗೆ ಬಂದ ಬೆನ್ನಲ್ಲೇ ಇದೀಗ ಜಾರ್ಖಾಂಡ್ ನಲ್ಲೂ ಪರೀಕ್ಷಾ ಕರ್ಮಕಾಂಡವೊಂದು ಬಯಲಾಗಿದೆ.
ಬಿಹಾರ ರಾಜ್ಯದ ಪರೀಕ್ಷಾ ಹಗರಣದ ಮಾದರಿಯಲ್ಲೇ ಜಾರ್ಖಂಡ್ ನ ಧನಬಾದ್ ನಲ್ಲಿರುವ ಆರ್.ಎಸ್ ಮೋರ್ ಕಾಲೇಜಿನ 11ನೇ ತರಗತಿಯಲ್ಲಿ ಸಾಮೂಹಿಕ ನಕಲು ಮಾಡಿರುವುದು ಇದೀಗ ಬೆಳಗಿಗೆ ಬಂದಿದೆ.
ಜುಲೈ 9 ರಂದು ನಡೆದ ಪರೀಕ್ಷೆಯಲ್ಲಿ ಒಂದೇ ಕೊಠಡಿಯಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪರೀಕ್ಷೆ ಬರೆಯಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಒಂದು ಬೆಂಚಿನಲ್ಲಿ 2 ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪರೀಕ್ಷೆ ಬರೆಸುವುದು ಸಾಮಾನ್ಯವಾಗಿ ಪರೀಕ್ಷಾ ನಿಯಮವಾಗಿದೆ. ಆದರೆ, ಜಾರ್ಖಂಡ್ ನಲ್ಲಿನ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಒಂದು ಬೆಂಚಿನಲ್ಲಿ 4-5 ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಲಾಗಿದೆ.
ಇನ್ನು ಕೆಲ ವಿದ್ಯಾರ್ಥಿಗಳು ಕಾಲೇಜಿನ ಹೊರ ಆವರಣದಲ್ಲಿ ಪರೀಕ್ಷೆ ಬರೆಯುತ್ತಿರುವುದು ಕಂಡು ಬಂದಿದೆ. ಈ ಕುರಿತ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಫೋಟೋದಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು ಮಾಡುತ್ತಿರುವುದು ಬಹಿರಂಗವಾಗಿ ಕಾಣುತ್ತಿದೆ. ಮತ್ತೊಂದು ಫೋಟೋದಲ್ಲಿ ವಿದ್ಯಾರ್ಥಿಯ ತಂದೆಯೊಬ್ಬರು ಮಗನಿಗೆ ಹೇಳಿಕೊಟ್ಟು ಪರೀಕ್ಷೆ ಬರೆಸುತ್ತಿರುವುದೂ ಕೂಡ ಕಂಡುಬಂದಿದೆ.
ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಜಾರ್ಖಂಡ್ ಶಿಕ್ಷಣ ಇಲಾಖೆ ವಿರುದ್ಧ ಸಾಕಷ್ಟು ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ.
ನಕಲು ವಿಚಾರ ಕುರಿತಂತೆ ಮಾತನಾಡಿರುವ ಕಾಲೇಜಿನ ಪ್ರಾಧ್ಯಾಪಕರು, ಕಾಲೇಜಿನಲ್ಲಿ ಸ್ಥಳದ ಅಭಾವವಿತ್ತು. ಹೀಗಾಗಿ 4-5 ವಿದ್ಯಾರ್ಥಿಗಳನ್ನು ಬೆಂಚಿನಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತಿದ್ದು. ಇನ್ನು ಕೆಲ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಜಾಗವಿಲ್ಲದ ಕಾರಣ ಅವರನ್ನು ಕಾಲೇಜಿನ ಹೊರವಲಯದಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗಿತ್ತು. ಪರೀಕ್ಷೆ ಸಮಯದಲ್ಲಿ ಮೊಬೈಲ್ ಫೋನ್ ಮತ್ತು ಬ್ಯಾಗ್ ಗಳಿಗೆ ನಿಷೇಧ ಹೇರಲಾಗಿತ್ತು ಎಂದು ಹೇಳಿದ್ದಾರೆ.
ನಕಲು ಮಾಡುತ್ತಿರುವುದು ಎಲ್ಲಿಯೂ ಕಂಡುಬಂದಿರಲಿಲ್ಲ. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿಯೇ ಪರೀಕ್ಷೆ ಬರೆಯುತ್ತಿದ್ದರು. ಯಾವುದೇ ವಿದ್ಯಾರ್ಥಿ ನಕಲು ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕಾಲೇಜಿನಲ್ಲಿ ಸ್ಥಳದ ಹಾಗೂ ಕೊಠಡಿಗಳ ಅಭಾವವಿದೆ. ಇಬ್ಬರು ಕುಳಿತುಕೊಳ್ಳಬೇಕಾದ ಬೆಂಚಿನಲ್ಲಿ 4-5 ವಿದ್ಯಾರ್ಥಿಗಳನ್ನು ಕೂರಿಸಿದರೂ ಸ್ಥಳದ ಅಭಾವ ಉಂಟಾಗಿತ್ತು. ಹೀಗಾಗಿ ಕೆಲ ವಿದ್ಯಾರ್ಥಿಗಳನ್ನು ಹೊರ ಆವರಣದಲ್ಲಿ ಕೂರಿಸಲಾಗಿತ್ತು ಎಂದು ಕಾಲೇಜು ಪ್ರಾಧ್ಯಾಪಕ ಮನೋರಂಜನ್ ಗುಪ್ತಾ ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು ಮಾಡಿ ಪರೀಕ್ಷೆ ಮಾಡುತ್ತಿರುವ ವಿಚಾರವನ್ನು ದಿನಪತ್ರಿಕೆಯ ಮೂಲಕ ತಿಳಿದುಕೊಂಡೆ. ಇದು ನಿಜಕ್ಕೂ ಗಂಭೀರವಾದ ವಿಚಾರವಾಗಿದೆ. ಇದಕ್ಕೆ ಸಂಬಂಧಪಟ್ಟ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಹಾಗೂ ಪ್ರಕರಣ ಸಂಬಂಧ ಶೀಘ್ರದಲ್ಲೇ ತನಿಖೆಗೆ ಆದೇಶಿಸಲಾಗುತ್ತದೆ ಎಂದು ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಉಪಾಧ್ಯಕ್ಷ ಫೂಲ್ ಸಿಂಗ್ ಅವಹು ಹೇಳಿದ್ದಾರೆ.
ಈ ಹಿಂದೆ ಬಿಹಾರ ರಾಜ್ಯದಲ್ಲೂ ಫಲಿತಾಂಶ ಹಗರಣವೊಂದು ಬಯಲಿಗೆ ಬಂದಿತ್ತು. 12ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಹಗರಣ ನಡೆದಿತ್ತು, ಪ್ರಕರಣದ ಪ್ರಮುಖ ಆರೋಪಿ ಮಾಜಿ ಪಿಯು ಮಂಡಳಿ ಅಧ್ಯಕ್ಷ ಲಾಲ್ಕೇಶ್ವರ್ ಪ್ರಸಾದ್ ಅವರನ್ನು ಜೂನ್ 20ರಂದು ಬಂಧಿಸಲಾಗಿತ್ತು.
Advertisement