
ಶ್ರೀನಗರ: ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕ ನೋರ್ವ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪತ್ತೆಯಾದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಕಳೆದ ವರ್ಷ ಮೇ 9ರಂದು ದೆಹಲಿಯ ಖಜೂರಿಖಾಸ್ ಪ್ರದೇಶದ ನಿವಾಸಿಯಾಗಿದ್ದ ರೇಖಾ ದೇವಿ ಎಂಬ ಮಹಿಳೆ ಟ್ಯೂಷನ್ ಗೆ ತೆರಳಿದ್ದ ತಮ್ಮ ಮಗ ಮನೆಗೆ ವಾಪಸ್ ಆಗಿಲ್ಲ ಎಂದು ಹೇಳಿ ಪೊಲೀಸರಲ್ಲಿ ದೂರು ನೀಡಿದ್ದರು. ಪೊಲೀಸರು ಸೇರಿದಂತೆ ಕುಟುಂಬದ ಇತರೆ ಸದಸ್ಯರು ನಾಪತ್ತೆಯಾದ ಬಾಲಕನಿಗಾಗಿ ವಿವಿಧೆಡೆ ಶೋಧ ನಡೆಸಿದ್ದರು. ಆದರೆ ಪುತ್ರನ ಸುಳಿವು ಪತ್ತೆಯಾಗದ ಹಿನ್ನಲೆಯಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಪ್ರಕರಣ ದಾಖಲಾಗಿ ಸತತ ಒಂದು ವರ್ಷವಾದರೂ ಬಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಪೊಲೀಸರು ಆತನ ಫೇಸ್ ಬುಕ್ ಖಾತೆಯನ್ನು ಪರಿಶೀಲಿಸಿದ ಪೊಲೀಸರಿಗೆ, ಆತನ ಖಾತೆಯಲ್ಲಿ ಪುಟ್ಟ ಸುಳಿವು ದೊರೆಯಿತು. ಅದೇನೆಂದರೆ ಬಾಲಕ ನಾಪತ್ತೆಯಾದ ಬಳಿಕ ಆತ ತನ್ನ ಫೇಸ್ ಬುಕ್ ಖಾತೆ ಮೂಲಕ ತನ್ನ ಸಹೋದರನೊಂದಿಗೆ ಚಾಟ್ ಮಾಡಿದ್ದ. 2015 ರ ನವೆಂಬರ್ ನಿಂದ ಈ ವ್ರಷದ ಏಪ್ರಿಲ್ ತಿಂಗಳವರೆಗೂ ಆತ ತನ್ನ ಸಹೋದರ ಪವನ್ ನೊಂದಿಗೆ ಚಾಟ್ ಮಾಡುತ್ತಿದ್ದ. ಸಹೋದರ ಎಷ್ಚೇ ಪರಿಪರಿಯಾಗಿ ಕೇಳಿಕೊಂಡುರೂ ತನ್ನ ಇರುವಿಕೆ ಮತ್ತು ಪ್ರದೇಶದ ಕುರಿತು ಮಾಹಿತಿ ನೀಡಲು ಬಾಲಕ ನಿರಾಕರಿಸುತ್ತಿದ್ದ.
ಇದೇ ಸುಳಿವನ್ನಿಟ್ಟುಕೊಂಡು ಸೈಬರ್ ಇಲಾಖೆಯ ನೆರವು ಪಡೆದ ಪೊಲೀಸರು, ಬಾಲಕ ಚಾಟ್ ಮಾಡುತ್ತಿದ್ದ ಕಂಪ್ಯೂಟರ್ ನ ಐಪಿ ಅಡ್ರೆಸ್ ಜಾಲವನ್ನು ಹಿಡಿದು ಶೋಧ ನಡೆಸಿದ್ದಾರೆ. ಈ ವೇಳೆ ಬಾಲಕ ಕಾಶ್ಮೀರದ ಶ್ರೀನಗರಕ್ಕೆ ತೆರಳಿದ್ದು, ಅಲ್ಲಿ ಅಕ್ಕಿ ಮಾರಾಟ ವ್ಯಾಪಾರಿ ಬಳಿ ಕೆಲಸಕ್ಕಿರುವ ವಿಚಾರವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಬಾಲಕನನ್ನು ವಿಚಾರಿಸಿದಾಗ ಬಾಲಕ ತಾನು ಸ್ವಇಚ್ಛೆಯಿಂದಲೇ ಪರಾರಿಯಾಗಿದ್ದು, ತನ್ನ ತಂದೆ ನಾನು ಚೆನ್ನಾಗಿ ಓದುತ್ತಿಲ್ಲ ಎಂದು ಬೈಯುತ್ತಿದ್ದರು. ಇದರಿಂದ ನೊಂದು ಮನೆ ಬಿಟ್ಟು ಹೋಗಿದ್ದೆ. ಆರಂಭದಲ್ಲಿ ಮದುವೆ ಸಮಾರಂಭಗಳಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ ಎಂದು ಬಾಲಕ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆ ನಾಪತ್ತೆಯಾದ ಮಗ ಫೇಸ್ ಬುಕ್ ನೆರವಿನಿಂದಾಗಿ ತಮ್ಮ ಪೋಷಕರನ್ನು ಸೇರುವಂತಾಗಿದೆ.
Advertisement