

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮರುಕಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬುಧವಾರ ಉನ್ನತಮಟ್ಟದ ಸಭೆಯನ್ನು ಕರೆದಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಇಂದು ಸಂಜೆ 6 ಗಂಟೆ ಸುಮಾರಿಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ರವಿ ಶಂಕರ್ ಪ್ರಸಾಗ್ ಸೇರಿದಂತೆ ಇನ್ನಿತರೆ ಉನ್ನತಾಧಿಕಾರಿಗಳು ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.
ಅರುಣಾಚಲಪ್ರದೇಶ ಬಿಕ್ಕಟ್ಟು ಕುರಿತಂತೆ ಇಂದು ಐತಿಹಾಸಿಕ ತೀರ್ಪನ್ನು ನೀಡಿದ್ದ ಸುಪ್ರೀಂಕೋರ್ಟ್, ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜಕೋವಾ ಅವರ ನಿರ್ಣಯವನ್ನು (ರಾಷ್ಟ್ರಪತಿ ಆಳ್ವಿಕೆ) ರದ್ದುಗೊಳಿಸಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ನಬಾಮ್ ತೂಕಿ ಹಿಂದಿರುಗಲು ಅವಕಾಶ ನೀಡುವಂತೆ ಆದೇಶಿಸಿತ್ತು. ನ್ಯಾಯಾಧೀಶ ಜೆ ಎಸ್ ಖೇಕರ್ ಮುಂದಾಳತ್ವದ ವಿಭಾಗೀಯ ಪೀಠ ಕೈಗೊಂಡ ಒಮ್ಮತದ ನಿರ್ಣಯದಲ್ಲಿ ಡಿಸೆಂಬರ್ 15, 2015 ಕ್ಕೆ ಮುಂಚಿತವಾಗಿ ಇದ್ದ ಸ್ಥಿತಿಯನ್ನು ಮರುಸ್ಥಾಪಿಸುವಂತೆ ತಿಳಿಸಿತ್ತು.