

ಶಿವಗಂಗಾ/ ಮಧುರೈ: ಪ್ರೇಮ ನಿವೇದನೆ ಮಾಡಲು ಬರೆದಿದ್ದ ಕವನವನ್ನು ಅವಹೇಳನ ಮಾಡಿದ್ದಕ್ಕಾಗಿ 11 ವರ್ಷದ ಹುಡುಗಿಯನ್ನು ವ್ಯಕ್ತಿಯೋರ್ವ ಅಪಹರಣ ಮಾಡಿ ಹತ್ಯೆ ಮಾಡಿರುವ ಘಟನೆ ಮಧುರೈ ನಲ್ಲಿ ನಡೆದಿದೆ.
ಮಿನಿ ವ್ಯಾನ್ ಡ್ರೈವರ್ ಆಗಿರುವ ಕಾರ್ತಿಕೇಯನ್(25) ಎಂಬ ವ್ಯಕ್ತಿ ಪ್ರೇಮ ನಿವೇದನೆಗಾಗಿ ಬರೆದಿದ್ದ 5 ಪುಟಗಳ ಕವಿತೆಯನ್ನು ಮೇಲನೆಟ್ಟೂರ್ ನ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ತನ್ನ ಸಂಬಂಧಿಕರ ಹುಡುಗಿ ಕಲೇಶ್ವರಿಗೆ ತೋರಿಸಿದ್ದಾನೆ. ಇದನ್ನು ನೋಡಿದ ಕಲೇಶ್ವರಿ ಕುಟುಂಬ ಸದಸ್ಯರಿಗೆ ತೋರಿಸಿದ್ದಾಳೆ ಪರಿಣಾಮವಾಗಿ ಕುಟುಂಬ ಸದಸ್ಯರು ಆಕೆಯಿಂದ ದೂರವಿರುವಂತೆ ಕಾರ್ತಿಕೇಯನ್ ಗೆ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ತಂಗಿಯ ವಯಸ್ಸಿನ ಹುಡುಗಿಗೆ ಪ್ರೇಮ ನಿವೇದನೆಯ ಕವನಗಳನ್ನು ತೋರಿಸಿದ್ದಕ್ಕೆ ಕಾರ್ತಿಕೇಯನ್ ನ ಸ್ನೇಹಿತರೂ ಅವಹೇಳನ ಮಾಡಿದ್ದಾರೆ. ಇದರಿಂದ ಅವಮಾನಕ್ಕೊಳಗಾದ ಕಾರ್ತಿಕೇಯನ್ ಕಲೇಶ್ವರಿ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.
ಕಲೇಶ್ವರಿ ಶಾಲೆಯಿಂದ ವಾಪಸ್ಸಾಗುತ್ತಿರಬೇಕಾದರೆ ದ್ವಿಚಕ್ರವಾಹನದಲ್ಲಿ ಬಂದ ಕಾರ್ತಿಕೇಯನ್ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆದರೆ ಮನೆಗೆ ಕರೆದೊಯ್ಯುವ ಬದಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೈಕಾಲು ಕಟ್ಟಿ ಚೂರಿಯಿಂದ ಇರಿದು, ಕತ್ತು ಸೀಳಿದ್ದಾನೆ. ನಂತರ ಹುಡುಗಿಯ ತಾಯಿಗೆ ಹಾಗೂ ತನ್ನ ತಾಯಿಗೆ ಕರೆ ಮಾಡಿ ಕಾಲೇಶ್ವರಿಯನ್ನು ಕೊಲೆ ಮಾಡಿರುವುದಾಗಿ ಹೇಳಿ ತಾನೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಸ್ಥಳೀಯ ಶಿವಗಂಗಾ ಸರ್ಕಾರಿ ವೈದ್ಯಕೀಯ ಕಾಲೇಜ್ ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಹರಣ ಹಾಗೂ ಹತ್ಯೆ ಮಾಡಿದ್ದಕ್ಕೆ ಕಾರ್ತಿಕೇಯನ್ ವಿರುದ್ಧ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.