

ವಾಷಿಂಗ್ಟನ್: ಆವೇಶ ಭರಿತ ಮಾತುಗಳಿಂದ ಪ್ರಸಿದ್ಧಿ ಪಡೆದಿರುವ ಅಮೆರಿಕದ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಟೀಂ ಕಂಪನಿಯೊಂದು ತಮ್ಮ ಆವೇಶ ಕಡಿಮೆ ಮಾಡಿಕೊಳ್ಳಲಿ ಎಂದು ಅಸ್ಸಾಂ ಗ್ರೀನ್ ಟೀ ಬ್ಯಾಗ್ ಗಳನ್ನು ರಫ್ತು ಮಾಡಿದೆ.
ಆತ್ಮೀಯ ಟ್ರಂಪ್ ನಿಮ್ಮ ಮನಸ್ಸಿನ ಶುದ್ಧೀಕರಣ, ಶಾಂತಿಗಾಗಿ ಎಂಬ ಸಂದೇಶ ಹೊಂದಿರುವ ಪತ್ರದ ಜತೆಗೆ ಕೋಲ್ಕತ್ತಾ ಮೂಲದ ಟೀಂ ಕಂಪನಿ 6 ಸಾವಿರ ಟೀ ಬ್ಯಾಗುಗಳನ್ನು ರವಾನಿಸಿದೆ.
ಪತ್ರದಲ್ಲಿ ಆತ್ಮೀಯ ಟ್ರಂಪ್ ಅವರಿಗೆ ನಮಸ್ಕಾರ, ನಾವು ಬಹಳಷ್ಟು ಟೀ ಬ್ಯಾಗುಗಳನ್ನು ನಿಮಗಾಗಿ ಕಳುಹಿಸಿದ್ದೇವೆ. ಇದು ನಿಮ್ಮ ಮನಸ್ಸನ್ನು ಶುದ್ಧಗೊಳಿಸುತ್ತದೆ. ನಿಮ್ಮ ಮನಸ್ಸಿನ ಶಾಂತಿಗಾಗಿ ನೆರವಾಗುತ್ತದೆ. ನಿಮ್ಮ ಸಲುವಾಗಿ, ಅಮೆರಿಕ ಸಲುವಾಗಿ, ವಿಶ್ವದ ಸಲುವಾಗಿ ಗ್ರೀನ್ ಟೀ ಕುಡಿಯಿರಿ ಎಂಬ ವಿಚಿತ್ರವಾದ ಸಂದೇಶವನ್ನು ಬರೆಯಲಾಗಿದೆ.
ನಿಮ್ಮಲ್ಲಿರುವ ಗೊಂದಲದಿಂದ ಟ್ರಂಪ್ ಅವರೇ ಬೇಗ ಹೊರ ಬನ್ನಿ. ನಿಮ್ಮ ವಿಚಾರವಾಗಿ ಇಡೀ ವಿಶ್ವವೇ ತಲೆಕೆಡಿಸಿಕೊಂಡಿದೆ. ಈ ಟೀ ಕುಡಿಯುತ್ತಿದ್ದಂತೆ ನೀವು ಬದಲಾಗುವಿರಿ ಎಂದು ಭಾವಿಸಿದ್ದೇವೆ. ಟೀ ಕುಡಿದು ನಿಮ್ಮಲ್ಲಿನ ಮನಸ್ಥಿತಿ ಬದಲಾದ ಮೇಲೆ ಇದರ ಮೊತ್ತವನ್ನು ಪಾವತಿಸಿದರೆ ಸಾಕು. ಅದಕ್ಕಾಗಿ ಜನರಿಂದ ಚಂದ ವಸೂಲಿ ಮಾಡಬೇಡಿ. ನಿಮ್ಮ ಹಣವನ್ನು ನೀಡಿ ಎಂದು ಕಂಪನಿಯ ಸಿಇಒ ಸುಮಿತ್ ಶಾ ಹೇಳಿದ್ದಾರೆ.