ಶೀಲಾ ದೀಕ್ಷಿತ್ ಉತ್ತರ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ: ಕಾಂಗ್ರೆಸ್
ನವದೆಹಲಿ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್ ಅವರನ್ನು ಆಯ್ಕೆ ಮಾಡಿರುವುದಾಗಿ ಕಾಂಗ್ರೆಸ್ ಗುರುವಾರ ಹೇಳಿದೆ..
ಚುನಾವಣಾ ಯೋಜನಾ ನಿಪುಣ ಪ್ರಶಾಂತ್ ಕಿಶೋರ್ ಅವರು ಶೀಲಾ ದೀಕ್ಷಿತ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದು, ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದಲ್ಲಿ ಶೀಲಾ ದೀಕ್ಷಿತ್ ಅವರ ನಿಲ್ಲಲಿದ್ದಾರೆಂದು ಹೇಳಿದ್ದಾರೆ.
ಶೀಲಾ ದೀಕ್ಷಿತ್ ಅವರು ಬ್ರಾಹ್ಮಣರಾಗಿದ್ದು, ಇದರಿಂದ ಕಾಂಗ್ರೆಸ್ ಗೆ ಹೆಚ್ಚು ಬೆಂಬಲ ವ್ಯಕ್ತವಾಗುವ ಸಾಧ್ಯತೆಗಳಿವೆ. ಚುನಾವಣಾ ಪ್ರಚಾರದ ವೇಳೆ ಶೀಲಾ ದೀಕ್ಷಿತ್ ಅವರು ಉನ್ನತ ಪಾತ್ರ ವಹಿಸಲಿದ್ದಾರೆಂದು ಅವರು ಹೇಳಿದ್ದಾರೆ.
ಶೀಲಾ ದೀಕ್ಷಿತ್ ಅವರು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಯುಪಿ ಶಂಕರ್ ದೀಕ್ಷಿತ್ ಅವರ ಸೊಸೆಯಾಗಿದ್ದಾರೆ. ಶಂಕರ್ ದೀಕ್ಷಿತ್ ಅವರು ಬ್ರಾಹ್ಮಣರಾಗಿದ್ದು, ಕೇಂದ್ರ ಸಚಿವ ಹಾಗೂ ರಾಜ್ಯಪಾಲ ಸ್ಥಾನದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದ್ದರು.
ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದ ಶೀಲಾ ದೀಕ್ಷಿತ್ ಅವರು ಈ ಹಿಂದೆ ನಾನು ಉತ್ತರ ಪ್ರದೇಶದ ಸೊಸೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಯಾವುದೇ ಸ್ಥಾನದಲ್ಲಿಯಾದರೂ ಸೇವೆ ಸಲ್ಲಿಸಲು ಸಿದ್ಧಳಿದ್ದೇನೆಂದು ಪರೋಕ್ಷವಾಗಿ ಹೇಳಿಕೊಂಡಿದ್ದರು.
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶೀಲಾ ದೀಕ್ಷಿತ್ ಅವರು ಕಳೆದ ತಿಂಗಳು ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ಉತ್ತರ ಪ್ರದೇಶದಲ್ಲಿ ಉನ್ನತ ಸ್ಥಾನವನ್ನು ನೀಡುವಂತೆ ಕೇಳಿದ್ದರು ಎಂದು ಹೇಳಲಾಗುತ್ತಿತ್ತು.
ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ತಂತ್ರ ರೂಪಿಸಿರುವ ಕಾಂಗ್ರೆಸ್, ಸಂಪ್ರದಾಯ ವೋಟ್ ಬ್ಯಾಂಕ್ ನತ್ತ ಗಮನ ಹರಿಸಿದೆ. ಇದರಂತೆ ಬ್ರಾಹ್ಮಣ ಸಮುದಾಯ ಮತಗಳ ಮೇಲೆ ಕಣ್ಣಿಟ್ಟಿರುವುದಾಗಿ ತಿಳಿದುಬಂದಿದೆ. ಸಮುದಾಯದ ಬೆಂಬಲದಿಂದ ಗೆಲವು ಸಾಧಿಸಲು ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಬಿಎಸ್ ಪಿ ನಾಯಕಿ ಮಾಯಾವತಿಯವರು ಬ್ರಾಹ್ಮಣ ಸಮುದಾಯದ ಕಡೆ ಗಮನ ಹರಿಸಿ ಈ ಸಮುದಾಯಕ್ಕೆ ಸೇರಿದ ಸಾಕಷ್ಟು ಅಭ್ಯರ್ಥಿಗಳಿಗೆ ಟಿಕೆಟ್ ಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿರುವ ಸಾಕಷ್ಟು ಬ್ರಾಹ್ಮಣರು ಮಾಯಾವತಿಯವರಿಗೆ ಮತ ಹಾಕುವ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ