
ನವದೆಹಲಿ: ಗುರುವಾರ ರಾತ್ರಿ ಫ್ರಾನ್ಸ್ ನ ನೀಸ್ ನಗರದ ಮೇಲೆ ನಡೆದ ಭೀಕರ ಉಗ್ರ ದಾಳಿಯಲ್ಲಿ ಯಾವುದೇ ಭಾರತೀಯ ಪ್ರಜೆಗೆ ತೊಂದರೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನೀಸ್ ನಗರದ ಮೇಲಿನ ಉಗ್ರ ದಾಳಿ ಬೆನ್ನಲ್ಲೇ ಈ ಬಗ್ಗೆ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ವಿದೇಶಾಂಗ ಇಲಾಖೆ ಅಧಿಕಾರಿಗಳು ಘಟನೆಯಲ್ಲಿ ಭಾರತೀಯ ಪ್ರಜೆಗಳಿಗೆ ಹಾನಿಯಾದ ಕುರಿತು ವರದಿಯಾಗಿಲ್ಲ. ಆದರೂ ಭಾರತೀಯರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುಲಾಗುತ್ತಿದೆ. ಅಂತೆಯೇ ಫ್ರಾನ್ಸ್ ನಲ್ಲಿರುವ ಎಲ್ಲ ಭಾರತೀಯರನ್ನು ಸಂಪರ್ಕಿಸಲಾಗುತ್ತಿದೆ ಎಂದು ಹೇಳಿದೆ.
ಇದೇ ವೇಳೆ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಅವರು, "ಫ್ರಾನ್ಸ್ ನಲ್ಲಿರುವ ಭಾರತೀಯರ ಸುರಕ್ಷತೆ ಕುರಿತಂತೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತೀಯರಿಗೆ ತೊಂದರೆಯಾಗಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ತೆಗೆದುಕೊಳ್ಳಬೇಕಾದ ಅಗತ್ಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಭಾರತೀಯರ ಸುರಕ್ಷತೆಗಾಗಿ ಕೇಂದ್ರ ವಿದೇಶಾಂಗ ಇಲಾಖೆ ನೂತನ ಸಹಾಯವಾಣಿ ತೆರೆದಿದ್ದು, ಸಹಾಯವಾಣಿ ಸಂಖ್ಯೆ ಈ ಕೆಳಗಿನಂತಿದೆ.
ನೀಸ್ ನಗರದ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ ಸಂಖ್ಯೆ
+33-8-20-26-06-06
ರಾಜಧಾನಿ ಪ್ಯಾರಿಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ ಸಂಖ್ಯೆ
+33-1-40507070
Advertisement