
ತಿರುವನಂತಪುರಂ: 20 ಯುವಕರ ನಾಪತ್ತೆ ಮತ್ತು ಇಸಿಸ್ ಸೇರ್ಪಡೆ ಊಹಾಪೋಹದ ಮೂಲಕ ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ದೇವರ ನಾಡು ಕೇರಳ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಒತ್ತಾಯ ಪೂರ್ವಕ ಮತಾಂತರದ ಗಂಭೀರ ಆರೋಪ ಕೇಳಿಬಂದಿದೆ.
ಅಪರ್ಣಾ ಎಂಬ ಹಿಂದೂ ಯುವತಿಯೊಬ್ಬಳನ್ನು ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರ ಗೊಳಿಸಲಾಗಿದೆ ಎಂದು ಸ್ವತಃ ಆ ಯುವತಿಯ ತಾಯಿ ದೂರು ನೀಡಿದ್ದಾರೆ. ಮೂಲಗಳ ಪ್ರಕಾರ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಅಪರ್ಣಾಳನ್ನು ಒತ್ತಾಯ ಪೂರ್ವಕವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದಾರೆ ಎಂದು ಆ ಯುವತಿಯ ತಾಯಿ ಪೊಲೀಸರಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಆಕೆಯ ಹೆಸರನ್ನು ಅಪರ್ಣಾಳ ಬದಲಾಗಿ ಷಹಾನಾ ಎಂದು ಬದಲಿಸಲಾಗಿದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ದೂರಿದ್ದಾರೆ.
ಮಿನಿ ವಿಜಯನ್ ಎಂಬುವವರು ತಿರುವನಂತಪುರದ ಪಂಗೋಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಮ್ಮ ಪುತ್ರಿ ಅಪರ್ಣಾ ಎರ್ನಾಕುಲಂ ನಲ್ಲಿರುವ ಜುವಲ್ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್ ನಲ್ಲಿ ತಂಗಿದ್ದಳು. ಇತ್ತೀಚೆಗೆ ಆಕೆಯನ್ನು ಒತ್ತಾಯಪೂರ್ವಕವಾಗಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನೊಂದು ಆಶ್ಚರ್ಯಕರ ಆಂಶವೆಂದರೆ ಈ ಹಿಂದೆ ಕೇರಳದಿಂದ ನಾಪತ್ತೆಯಾಗಿ ಇಸಿಸ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದ 20 ಯುವಕರ ಪೈಕಿ ಅಪರ್ಣಾ ಕೂಡ ಒಬ್ಬಳಾಗಿದ್ದಾಳೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ವಾರದ ಹಿಂದಷ್ಟೇ ಇಂತಹುದೇ ಮತ್ತೊಂದು ಪ್ರಕರಣ ದಾಖಲಾಗಿತ್ತು. ನಿಮಿಷ ಎಂಬ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೋರ್ವ ಪ್ರೀತಿಸಿ ಆಕೆಯನ್ನು ಇಸ್ಲಾಂಗೆ ಮತಾಂತರಿಸಿದ್ದ. ಬಳಿಕ ಆಕೆಯ ಹೆಸರನ್ನು ಫಾತಿಮಾ ಎಂದು ಬದಲಿಸಿದ್ದ ಎಂದು ಯುವತಿಯ ತಾಯಿ ದೂರು ನೀಡಿದ್ದರು. ಪ್ರಮುಖ ಅಂಶವೆಂದರೆ ಈ ಜೋಡಿ ಕೂಡ ಕೇರಳದಿಂದ ನಾಪತ್ತೆಯಾದ 20 ಮಂದಿಯಲ್ಲಿ ಸೇರಿದೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಕೇರಳದ ಕಲ್ಲಿಕೋಟೆಯಲ್ಲಿರುವ ಮೂಲಭೂತವಾದಿ ಸಂಸ್ಥೆಯೊಂದು ಮುಸ್ಲಿಮೇತರ ಯುವಕರನ್ನು ಆಕರ್ಷಿಸಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಕೇರಳದ ಕಾಸರಗೋಜು, ಪಾಲಕ್ಕಾಡ್, ಕೊಚ್ಚಿನ್ ಮತ್ತು ತಿರುವನಂತಪುರದ ಸುಮಾರು 20 ಮಂದಿ ಯುವಕರು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಸೇರಿರುವ ಕುರಿತು ವ್ಯಾಪಕ ಸುದ್ದಿ ಹರಿದಾಡಿತ್ತು.
Advertisement