ನವದೆಹಲಿ: ಗಾಬರಿಯಾಗುವ ಅಂಕಿಅಂಶವೊಂದರಲ್ಲಿ ಈ ವರ್ಷ ಇಲ್ಲಿಯವರೆಗೆ 73 ಹುಲಿಗಳು ಮೃತಪಟ್ಟಿದ್ದು, ಪ್ರತಿ ತಿಂಗಳು ಸುಮಾರು 10 ಹುಲಿಗಳು ಅಸುನೀಗುತ್ತಿವೆ. ಅವುಗಳಲ್ಲಿ ಅತಿಹೆಚ್ಚು ಬೇಟೆಯಾಡಿ ಕೊಲ್ಲಲ್ಪಡುತ್ತವೆ. ಕಳೆದ ವರ್ಷ ಮೃತಪಟ್ಟ ಹುಲಿಗಳ ಸಂಖ್ಯೆ 78 ಆಗಿತ್ತು.
ಮೃತಪಟ್ಟ 73 ಹುಲಿಗಳಲ್ಲಿ 21 ಬೇಟೆಯಾಡಿ, 7 ಹುಲಿಗಳು ಸಹಜವಾಗಿ ಮತ್ತು ಇನ್ನು 45 ಹುಲಿಗಳು ಹೇಗೆ ಸಾವನ್ನಪ್ಪಿದವು ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪರಿಸರ ಖಾತೆ ಸಚಿವ ಅನಿಲ್ ಮಾದವ್ ದವೆ ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಮೃತಪಟ್ಟ 78 ಹುಲಿಗಳಲ್ಲಿ 14 ಹುಲಿಗಳು ಬೇಟೆಯಾಡಿ ಮತ್ತು ಸೆರೆ ಹಿಡಿದು, 28 ಹುಲಿಗಳು ಸ್ವಾಭಾವಿಕವಾಗಿ ಮತ್ತು ಇತರ 36 ಹುಲಿಗಳು ಹೇಗೆ ಮೃತಪಟ್ಟವು ಎಂದು ಕಾರಣ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಭಾರತ, ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿದೆ. ಆದರೆ ಅಭಿವೃದ್ಧಿ ಚಟುವಟಿಕೆಗಳು ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದಾಗಿ ಹುಲಿಗಳ ವಾಸಸ್ಥಾನಕ್ಕೆ ಧಕ್ಕೆಯುಂಟಾಗುತ್ತಿದೆ.
ಹುಲಿಗಳನ್ನು ರಕ್ಷಿಸಿ ಉಳಿಸಲು ಹುಲಿ ಕಾರಿಡಾರ್ ಗಳ ನಿರ್ಮಾಣಕ್ಕೆ ಕಡ್ಡಾಯ ಅರಣ್ಯೀಕರಣಕ್ಕೆ ಅನುದಾನ ಮತ್ತು ಭೂಮಿ ಒದಗಿಸಲು ಸರ್ಕಾರ ಯೋಜನೆಯನ್ನು ತರಲಿದೆ.