ಲಖನೌ: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ಅವರನ್ನು ಉತ್ತರ ಪ್ರದೇಶ ಮತ್ತು ಬಿಹಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಿಹಾರದ ಬಕ್ಸಾರ್ನಲ್ಲಿ ಶುಕ್ರವಾರ ಬಂಧಿಸಿದ್ದಾರೆ.
ಮಾಯಾವತಿ ಅವರು ಒಬ್ಬ ವೇಶ್ಯೆಗಿಂತಲೂ ಕಡೆ ಎಂದಿದ್ದ ದಯಾಶಂಕರ್ ಸಿಂಗ್ ವಿರುದ್ಧ ಎಸ್ ಸಿ/ಎಸ್ ಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ದಯಾಶಂಕರ್ ಸಿಂಗ್ ಅವರನ್ನು ಇಂದು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಯಾವತಿ ಅವರು ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದು, ಅವರು ಒಬ್ಬ ವೇಶ್ಯೆಗಿಂತಲೂ ಕಡೆ ಎಂದು ಟೀಕಿಸಿದ್ದರು. ಇದಕ್ಕೆ ಸ್ವಪಕ್ಷ ಬಿಜೆಪಿ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಬಿಜೆಪಿ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.
ಬಿಎಸ್ಪಿ ಕಾರ್ಯಕರ್ತರು ದಲಿತ ಮಹಿಳೆಗೆ ಅವಮಾನ ಮಾಡಿದ್ದಾರೆಂದು ಎಫ್ಐಆರ್ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ದಯಾಶಂಕರ್ ಕುಟುಂಬ ಸದಸ್ಯರು ಮಾಯಾವತಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.