
ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ಇಸೀಸ್ ಉಗ್ರ ಸಂಘಟನೆ ಬೆಂಬಲಿಗ ಮೊಹಮ್ಮದ್ ಸಿರಾಜುದ್ದೀನ್ ನ ಉಗ್ರ ಯೋಜನೆಗಳ ಬಗ್ಗೆ ಆತನ ಪತ್ನಿ ಮಾಹಿತಿ ನೀಡಿದ್ದು, ಇಸೀಸ್ ಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಸಿರಾಜುದ್ದೀನ್ ಹೊಂದಿದ್ದ ಯೋಜನೆಗಳನ್ನು ಬಹಿರಂಗಪಡಿಸಿದ್ದಾಳೆ.
ಸಿರಿಯಾಗೆ ವಲಸೆ ಹೋಗುವುದರ ಬಗ್ಗೆ ಮೊಹಮ್ಮದ್ ಸಿರಾಜುದ್ದೀನ್ ತನ್ನ ಬಳಿ ಹೇಳಿಕೊಂಡಿದ್ದ ಎಂದು ಆತನ ಪತ್ನಿ ತಿಳಿಸಿದ್ದು, ತಮಿಳುನಾಡಿನಲ್ಲಿದ್ದ ಇಸೀಸ್ ಉಗ್ರ ಸಂಘಟನೆಯ ನೇಮಕಾತಿದಾರ ಮೊಹಮ್ಮದ್ ನಸೀರ್ ನೊಂದಿಗೆ ಸಂಪರ್ಕ ಹೊಂದಿದ್ದ ಎಂಬುದನ್ನೂ ಒಪ್ಪಿಕೊಂಡಿದ್ದಾಳೆ. ಇಸೀಸ್ ಬೆಂಬಲಿಗರ ಮೇಲೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡ ಕೆಲವು ದಿನಗಳ ಹಿಂದೆ ಮೊಹಮ್ಮದ್ ನಸೀರ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸೀಸ್ ಸಂಘಟನೆಗೆ ಸಂಬಂಧಿಸಿದಂತೆ ಉತ್ತಮ ಸಂಪರ್ಕ ಹೊಂದಿದ್ದ ಮೊಹಮ್ಮದ್ ಸಿರಾಜುದ್ದೀನ್ ಇಸೀಸ್ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳಲು ದುರ್ಬಲ ಮಹಿಳೆಯರನ್ನು ಗುರಿಯಾಗಿರಿಸಿಕೊಂಡಿದ್ದ ಎಂದು ಎನ್ಐಎ ತಿಳಿಸಿದೆ.
ನೇಮಕಾತಿ ಭಾಗವಾಗಿ ಯುಎಇ ಮೂಲದ ಯುವತಿ ಅಮೀನಾಳನ್ನು ಪರಿಚಯ ಮಾಡಿಕೊಂಡಿದ್ದ ಮೊಹಮ್ಮದ್ ಸಿರಾಜುದ್ದೀನ್ ಆಕೆಗೆ ಉಗ್ರವಾದಲ್ಲಿ ತೊಡಗುವಂತೆ ಪ್ರಚೋದನೆ ನೀಡಿದ್ದ ಅಷ್ಟೇ ಅಲ್ಲದೇ ಅವಳನ್ನು ಎರಡನೇ ಪತ್ನಿಯನ್ನಾಗಿ ಸ್ವೀಕರಿಸುವ ಬಗ್ಗೆ ತನ್ನ ಮೊದಲ ಪತ್ನಿಯೊಂದಿಗೆ ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ. ಅಮೀನಾಳನ್ನು ವಿವಾಹವಾಗಿ ಮೊದಲ ಪತ್ನಿಯೊಂದಿಗೆ ಸಿರಿಯಾಗೆ ತೆರಳುವುದು ಮೊಹಮ್ಮದ್ ಸಿರಾಜುದ್ದೀನ್ ನ ಯೋಜನೆಯಾಗಿತ್ತು ಎಂದು ಆತನ ಮೊದಲ ಪತ್ನಿ ಹೇಳಿಕೆಯಿಂದ ತಿಳಿದುಬಂದಿದೆ. ಫೇಸ್ ಬುಕ್, ವಾಟ್ಸ್ ಆಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಸಂವಹನದ ಮೂಲಕ ಈ ಬಗೆಗಿನ ಮಾಹಿತಿಯನ್ನು ಎನ್ ಐಎ ಕಲೆಹಾಕಿದೆ.
Advertisement