

ಚಂಡೀಗಢ: ರಾಜ್ಯಸಭಾ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಪಿತೂರಿ ನಡೆದಿದ್ದು, ಮರು ಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕ ಭುಪೇಂದರ್ ಸಿಂಗ್ ಹೂಡಾ ಅವರು ಭಾನುವಾರ ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಆರ್.ಕೆ. ಆನಂದ್ ಅವರನ್ನು ಸೋಲಿಸಲು ಪಿತೂರಿ ನಡೆಸಲಾಗಿದೆ. ನಮ್ಮ ಶಾಸಕರು ತಮ್ಮ ಇಚ್ಛೆಗೆ ತಕ್ಕಂತೆ ಮತ ಹಾಕಲು ಅವಕಾಶ ನೀಡಿಲ್ಲ. ಮತ ಕ್ಷೇತ್ರದಲ್ಲಿ ಮತ ಬದಲಾವಣೆ ಮಾಡಿದ್ದಾರೆ. ಆರ್.ಕೆ. ಆನಂದ್ ಅವರು ಈ ಕುರಿತು ದೂರು ದಾಖಲಿಸಬೇಕೆಂದು ಹೇಳಿದ್ದಾರೆ.
ಹಿರಿಯ ನ್ಯಾಯವಾದಿ ಆರ್.ಕೆ. ಆನಂದ್, ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದು, ಇವರಿಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿತ್ತು. ಆದರೆ, ಹೂಡಾ ಬಣದ 14 ಶಾಸಕರು ಮತದಾನದ ವೇಳೆ ಚುನಾವಣಾ ಆಯೋಗ ನೀಡುವ ಪೆನ್ನಿನ ಬದಲಾಗಿ ತಮ್ಮದೇ ಪೆನ್ನಿನ ಮೂಲಕ ಪ್ರಾಶಸ್ಯದ ಮತ ಗುರುತು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಈ 14 ಕಾಂಗ್ರೆಸ್ ಶಾಸಕರ ಮತವನ್ನು ಅಸಿಂಧುಗೊಳಿಸಲಾಗಿತ್ತು. ಶಾಸಕರ ಮತಗಳನ್ನು ಅಸಿಂಧುಗೊಳಿಸಿದ್ದರಿಂದಾಗಿ ಬಿಜೆಪಿ ಬೆಂಬಲಿತ ಸುಭಾಷ್ ಚಂದ್ರ ಅವರು ಗೆಲವು ಸಾಧಿಸುವ ಮೂಲಕ ಆನಂದ್ ಅವರನ್ನು ಸೋಲು ಕಾಣುವಂತೆ ಮಾಡಿದ್ದರು.
14 ಶಾಸಕರ ಮತಗಳನ್ನು ಅಸಿಂಧುಗೊಳಿಸಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಇದೀಗ ಈ ಕುರಿತಂತೆ ಸ್ಪಷ್ಟನೆ ನೀಡಿವಂತೆ ಹೂಡಾ ಅವರನ್ನು ಕಾಂಗ್ರೆಸ್ ಕೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.