
ಕಾರವಾರ: ಕರ್ನಾಟಕದ ಕಾರವಾರದಲ್ಲಿ ನಿರ್ಮಾಣವಾಗುತ್ತಿರುವ ಸೀಬರ್ಡ್ ನೌಕಾನೆಲೆಯ 2 ಹಂತದ ಕಾಮಗಾರಿ ಆರಂಭವಾಗಿದ್ದು, ಅಮೆರಿಕದ ಪ್ರತಿಷ್ಠಿತ ಏಕಾಮ್ (ಎಇಸಿಒಎಂ) ಸಂಸ್ಥೆ ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಕಾರವಾರದಲ್ಲಿ ನಿರ್ಮಾಣವಾಗುತ್ತಿರುವ ಈ ನೌಕೆನೆಲೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ ಏಷ್ಯಾಖಂಡದಲ್ಲೇ ಅತೀ ದೊಡ್ಡ ನೌಕಾನೆಲೆ ಎಂಬ ಕೀರ್ತಿಗೆ ಭಾಜನವಾಗಲಿದೆ. ಸೀಬರ್ಡ್ ನೌಕಾ ನೆಲೆಯ ಯೋಜನೆಯ ವೆಚ್ಚ ಬರೊಬ್ಬರಿ 3 ಬಿಲಿಯನ್ ಅಮೆರಿಕನ್ ಡಾಲರ್ (12,750 ಕೋಟಿ ರೂ.) ಮೊತ್ತದಾಗಿದ್ದು, ಇಂತಹ ಪ್ರತಿಷ್ಠಿತ ಕಾಮಗಾರಿ ಯೋಜನೆಯ ನಿರ್ವಹಣಾ ಸಲಹೆಗಾರರಾಗಿ ಅಮೆರಿಕದ ಪ್ರತಿಷ್ಠಿತ ಸಂಸ್ಥೆ ಏಕಾಮ್ ಟೆಂಡರ್ ಪಡೆದು ಕಾಮಗಾರಿ ಆರಂಭಿಸಿದೆ. ಏಕಾಮ್ ಸಂಸ್ಥೆ ಪ್ರಸ್ತುತ ಲಾಸ್ ಎಂಜಲೀಸ್ನಲ್ಲಿ ಕಚೇರಿ ಹೊಂದಿದ್ದು, ಕಂಪನಿ ನೇರವಾಗಿ ಕಾಮಗಾರಿಗಳನ್ನು ಕೈಗೊಳ್ಳುವುದಿಲ್ಲ. ಯೋಜನೆ ರೂಪಿಸಿ ವಿನ್ಯಾಸ ಮಾಡಿ ಬೇರೆ ಬೇರೆ ಕಾಮಗಾರಿಗೆ ಪ್ರತ್ಯೇಕ ಟೆಂಡರ್ ಕರೆದು ಮೇಲ್ವಿಚಾರಣೆ ನೋಡಿಕೊಳ್ಳಲಿದೆ. ಅಗತ್ಯಬಿದ್ದಲ್ಲಿ ಕೆಲ ಕಾಮಗಾರಿಯನ್ನೂ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಶಸ್ತ್ರಾಸ್ತ್ರ ಪೂರೈಕೆ, ಶಸ್ತ್ರಾಗಾರ ನಿರ್ಮಾಣ ಸೇರಿದಂತೆ ವಿಶ್ವದಾದ್ಯಂತ ಹಲವು ರಾಷ್ಟ್ರಗಳಲ್ಲಿ ಕಾಮಗಾರಿ ಕೈಗೊಂಡಿರುವ ಈ ಕಂಪನಿ, ಭಾರತದಲ್ಲಿ ಹೈದರಾಬಾದ್ ಮೆಟ್ರೋ, ದೆಹಲಿ ಒಳಚರಂಡಿ ವ್ಯವಸ್ಥೆ ಮುಂತಾದ ಕಾಮಗಾರಿಗಳನ್ನು ಈಗಾಗಲೇ ನಡೆಸಿ ಯಶಸ್ವಿಯಾಗಿದೆ. ಇದೀಗ ಕಾರವಾರದ ಸೀಬರ್ಡ್ ನೌಕಾನೆಲೆ ಕಾಮಗಾರಿಯನ್ನು ಸಂಸ್ಥೆ ಆರಂಭಿಸಿದ್ದು, ಈಗಾಗಲೇ ಯೋಜನೆ ರೂಪಿಸಿ ಟೆಂಡರ್ ಪ್ರಕ್ರಿಯೆ ಕೂಡ ಆರಂಭಿಸಿದೆ. ಟೋಫೊಗ್ರಾಫಿಕಲ್ (ಭೌಗೋಳಿಕ) ಸರ್ವೆ, ನೌಕಾ ಶಸ್ತ್ರಾಗಾರ ಹಾಗೂ ಟೌನ್ಶಿಪ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪ್ರೊಜೆಕ್ಟ್ 2-ಎ ಪೂರ್ಣವಾದ ನಂತರ ಸುಮಾರು 1 ಲಕ್ಷ ಜನ ನೌಕಾ ನೆಲೆ ಪ್ರದೇಶಕ್ಕೆ ಬರಲಿದ್ದು, ಅದಕ್ಕಾಗಿ ನೌಕಾನೆಲೆಯ 25 ಕಿ.ಮೀ. ವ್ಯಾಪ್ತಿಯಲ್ಲಿ 1,224 ಕೋಟಿ ರು. ವೆಚ್ಚದಲ್ಲಿ 4 ಪ್ರತ್ಯೇಕ ಟೌನ್ಶಿಪ್ ನಿರ್ಮಾಣಕ್ಕೆ ಯೋಜನೆ ಕೈಗೊಳ್ಳಲಾಗಿದೆ.
10 ವಸತಿ ಸಮುಚ್ಚಯ (ರೆಸಿಡೆನ್ಸಿಯಲ್ ಟವರ್), ಶಾಲೆ, ಮೈದಾನ, ಶಾಪಿಂಗ್ ಮಾಲ್ ನಿರ್ಮಾಣ ಈ ಯೋಜನೆಯಲ್ಲಿ ಸೇರಿದ್ದು, ಕಾರವಾರದ ಬಿಣಗಾ, ಬೈತಖೋಲ್ ಭಾಗದಲ್ಲಿ ಮೊದಲ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ. 140 ಕೋಟಿ ರು. ವೆಚ್ಚದ ಶಸ್ತ್ರಾಗಾರ, ಮಿಸೈಲ್ ತಂತ್ರಜ್ಞಾನ ಕೇಂದ್ರ, ನೌಕಾ ಶಸ್ತ್ರಾಸ್ತ್ರ ಘಟಕ ನಿರ್ಮಾಣಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ಪರಿಸರಕ್ಕೆ ಹಾನಿಯಾಗದಂತೆ ಯೋಜನೆ
ಗುಡ್ಡ ಹಾಗೂ ಸಮುದ್ರ ತಟದ ಪ್ರದೇಶದಲ್ಲಿ ಯೋಜನೆ ರೂಪಿಸುವುದು ಕಷ್ಟದ ಕೆಲಸವಾಗಿದ್ದು, ಯೋಜನೆಯ ಉದ್ದೇಶಿತ ಪ್ರದೇಶದಲ್ಲಿ ಸಾಕಷ್ಟು ಎತ್ತರದ ಗುಡ್ಡಗಳು, ದಟ್ಟ ಕಾಡಿದೆ. ಹೀಗಾಗಿ ಪರಿಸರಕ್ಕೆ ಕಡಿಮೆ ಹಾನಿಯಾಗುವಂತೆ ಯೋಜನೆ ರೂಪಿಸಿರುವುದಾಗಿ ಏಕಾಮ್ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ಹೇಳಿಕೊಂಡಿದೆ.ಇದಲ್ಲದೆ ನೌಕಾ ವಿಮಾನ ನಿಲ್ದಾಣ ರನ್ವೇ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆಯಾದರೂ ಈ ಕುರಿತು ಇದುವರೆಗೂ ಸ್ಪಷ್ಟ ನಿರ್ಣಯವಾಗಿಲ್ಲ ಎಂದು ತಿಳಿದುಬಂದಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ರಕ್ಷಣೆ ಕುರಿತ ಸಂಪುಟ ಸಮಿತಿ ಸೀಬರ್ಡ್ ನೌಕಾನೆಲೆಯ 2ನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಿತ್ತು. 2017-18ರಲ್ಲಿ ಈ ಪ್ರತಿಷ್ಠಿತ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
Advertisement