
ಮಧುರೈ: ಬ್ಯಾಂಕ್ ಸಾಲ ಪಾವತಿಸುವಲ್ಲಿ ವ್ಯಕ್ತಿ ವಿಫಲನಾದರೆ ಆತನ ಉಳಿತಾಯ ಖಾತೆಯಿಂದಲೇ ಹಣ ವಸೂಲಿ ಮಾಡಬಹುದು ಎಂದು ಶನಿವಾರ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ. ಎಂ.ವೇಣುಗೋಪಾಲ್ ಅವರು, ಸಾಲ ಪಡೆದ ಮೇಲೆ ಮರುಪಾವತಿ ಮಾಡುವುದು ಗ್ರಾಹಕರ ಕರ್ತವ್ಯವಾಗಿದ್ದು, ಒಂದು ವೇಳೆ ಆತ ಸಾಲ ಪಾವತಿಸಲು ವಿಫಲನಾದರೆ ಆತನ ಎಸ್‌ಬಿ ಖಾತೆಯಿಂದ ಹಣ ವಸೂಲಿ ಮಾಡಬಹುದು ಎಂದು ಹೇಳಿದ್ದಾರೆ.
ತಮಿಳುನಾಡು ವಿದ್ಯುತ್ ಇಲಾಖೆಯ ಮಾಜಿ ನೌಕರರೊಬ್ಬರು 2012ರ ಅಕ್ಟೋಬರ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ 75ಸಾವಿರ ಕೃಷಿ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ 10 ತಿಂಗಳ ಅವಧಿ ನಿಗದಿಯಾಗಿತ್ತು. ಆದರೆ ಸಾಲ ಪಡೆದಾತ 2 ವರ್ಷಗಳೇ ಕಳೆದರೂ ಸಾಲ ಮರುಪಾವತಿ ಮಾಡಿರಲಿಲ್ಲ. ಹೀಗಾಗಿ ಬ್ಯಾಂಕ್ ಅಧಿಕಾರಿಗಳು ಸಾಲ ಪಡೆದಾತನ ಉಳಿತಾಯ ಖಾತೆಯಿಂದ ಹಣ ಪಡೆದಿದ್ದರು.
ಬ್ಯಾಂಕ್ ಅಧಿಕಾರಿಗಳ ಕ್ರಮದ ವಿರುದ್ಧ ಸಾಲಪಡೆದ ವ್ಯಕ್ತಿ ಕೋರ್ಟ್ ಮೆಟ್ಟಿಲೇರಿದ್ದ. ಅಲ್ಲದೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದ. ಅರ್ಜಿ ಸ್ವೀಕರಿಸಿದ್ದ ಮದ್ರಾಸ್ ನ್ಯಾಯಾಲಯ ನಿನ್ನೆ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ವ್ಯಕ್ತಿಯು ತಾನು ಪಡೆದ ಸಾಲ ಪಾವತಿಸಲು ವಿಫಲನಾದರೆ ಆತನ ಎಸ್‌ಬಿ ಖಾತೆಯಿಂದ ಹಣ ವಸೂಲಿ ಮಾಡಬಹುದು. ಸಾಲ ನೀಡಿಕೆ ವೇಳೆ ಗ್ರಾಹಕ ಮಾಡಿಕೊಂಡ ಒಪ್ಪಂದದಂತೆ ಬ್ಯಾಂಕ್ ನಡೆದುಕೊಂಡಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ.
Advertisement