

ಇಟನಗರ್: ಅರುಣಾಚನ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯಲ್ಲಿ ಒತ್ತಾಯಪೂರ್ವಕ ಮದುವೆಯಿಂದ 13 ವರ್ಷದ ಬಾಲಕಿಯೊಬ್ಬಳು ತಪ್ಪಿಸಿಕೊಂಡ ಘಟನೆ ರಾಜ್ಯದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಇದೆ ಎಂಬುದನ್ನು ತೋರಿಸುತ್ತದೆ.
ಜೆರೋನಿ ತವೊ ಎಂಬ ಬಾಲಕಿ 2013ರಲ್ಲಿ ಮದುವೆಯಾಗಿದ್ದಳು. ಈಕೆ ಮಹಿಳಾ ಅಭಿವೃದ್ಧಿ ಸಂಘಟನೆಯ ಸಂಧಾನದಿಂದ ಮದುವೆಯನ್ನು ಮುರಿದು ಹಾಕಲಾಯಿತು ಎಂದು ಪೂರ್ವ ಕಮೆಂಗ್ ಘಟಕದ ಪ್ರಧಾನ ಕಾರ್ಯದರ್ಶಿ ಪೂಜಾ ಸೋನಮ್ ನತುಂಗ್ ತಿಳಿಸಿದ್ದಾರೆ.
ಮದುವೆಯನ್ನು ಮುರಿದುಹಾಕುವಂತೆ ಸಹಾಯ ಕೋರಲು ತನ್ನ ಗ್ರಾಮದಿಂದ ಜೆರೋನಿ ದಟ್ಟ ಅರಣ್ಯದ ಮೂಲಕ ನಡೆದುಕೊಂಡು ಬಂದು ಉಪ ನಿರ್ದೇಶಕರ ಕಚೇರಿ ತಲುಪಿದ್ದಳು. ಅಸಲಿಗೆ ಜೆರೋನಿಗೆ 2008ರಲ್ಲಿ ಆಕೆ 5 ವರ್ಷದವಳಿದ್ದಾಗಲೇ ಅವಳಿಗಿಂತ ವಯಸ್ಸಲ್ಲಿ ಅತ್ಯಂತ ಹಿರಿಯನ ಜೊತೆ ಆಕೆಯ ಪೋಷಕರು ಮದುವೆ ನಿಶ್ಚಯ ಮಾಡಿದ್ದರು. ಅದರಂತೆ 2013ರಲ್ಲಿ ಮದುವೆಯಾಗಿತ್ತು. ವರನಿಗೆ ಆಗ ಸುಮಾರು 20 ವರ್ಷ.
ಮಹಿಳಾ ಅಭಿವೃದ್ಧಿ ಸಂಘಟನೆ ಮಾಡುತ್ತಿದ್ದ ಜಾಗೃತಿ ಅಭಿಯಾನ ಕಿವಿಗೆ ಬಿದ್ದಾಗ ದೃಢ ನಿರ್ಧಾರ ತೆಗೆದುಕೊಂಡ ಜೆರೋನಿ ತವೊ ತನ್ನ ಬಾಲ್ಯ ವಿವಾಹಕ್ಕೆ ಕೊನೆ ಹಾಡಬೇಕೆಂದು ನಿರ್ಧರಿಸಿದಳು.
ಕಳೆದ ತಿಂಗಳು 31ರಂದು ಮನೆಯಲ್ಲಿ ಎಲ್ಲರೂ ಮಲಗಿರುವಾಗ ಮನೆಯಿಂದ ಹೊರಬಿದ್ದ ಜೆರೊನಿ ತನ್ನ ಬಾಲ್ಯವಿವಾಹ ವಿಷಯವನ್ನು ನಮ್ಮ ಗಮನಕ್ಕೆ ತಂದಳು. ಐಸಿಡಿಸಿ ಘಟಕ ಮತ್ತು ಪೂರ್ವ ಕಮೆಂಗ್ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಸಂಘಟನೆಗಳ ಗಮನಕ್ಕೆ ತಂದು ಚರ್ಚೆ ಮಾಡಿ ಆಕೆಯನ್ನು ಬಂಧಮುಕ್ತಗೊಳಿಸಲಾಯಿತು ಎನ್ನುತ್ತಾರೆ ಸೋನಮ್ ನತುಂಗ್.
ಜೆರೋನಿಯ ಪತಿ ತಲಿಂಗ್ ಪಿಂಚೆ ತನ್ನ ಪತ್ನಿಯ ತೀರ್ಮಾನವನ್ನು ಗೌರವಿಸಿ ಒಪ್ಪಿ, ಮದುವೆ ಮುರಿಯಲು ಒಪ್ಪಿಗೆ ನೀಡಿದ ಎನ್ನುತ್ತಾರೆ ಅಧಿಕಾರಿಗಳು.