
ನವದೆಹಲಿ: ದಕ್ಷಿಣ ದೆಹಲಿಯಲ್ಲಿ ನೃತ್ಯ ಶಿಕ್ಷಕನೊಬ್ಬ ತನ್ನ ಗರ್ಲ್ ಫ್ರೆಂಡ್ ಅನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ದೆಹಲಿಯ ಸೈನಿಕ್ ಫಾರ್ಮ್ ಪ್ರದೇಶದಲ್ಲಿ ಡ್ಯಾನ್ಸ್ ಸ್ಟುಡಿಯೋವನ್ನು ನಡೆಸುತ್ತಿದ್ದ ಇಂದೋರ್ ಮೂಲದ ನೃತ್ಯ ಶಿಕ್ಷಕ ದೀಪಕ್ ಮೋರೆ ಯಾನೆ ಸಚಿನ್ ತನ್ನ 25ರ ಹರೆಯದ ಗೆಳತಿಯನ್ನು ವಿದ್ಯುತ್ ವೈಯರ್ ನಿಂದ ಕುತ್ತಿಗೆ ಬಿಗಿದು ಸಾಯಿಸಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ ಎರಡು ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿದ್ದ ದೀಪಕ್ ನಗರದ ಬೇರೆ ಬೇರೆ ಸ್ಟುಡಿಯೋಗಳಲ್ಲಿ ವಿದ್ಯಾರ್ಥಿಗಳಿಗೆ ಹಿಪ್ ಹಾಪ್ ನೃತ್ಯಗಳನ್ನು ಕಲಿಸಿಕೊಡುತ್ತಿದ್ದ. ಆತನ ತನ್ನ ಗೆಳತಿ ಯೋಗಿತಾಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದಕ್ಷಿಣ ದೆಹಲಿಯ ಹೆಚ್ಚುವರಿ ಡೆಪ್ಯುಟಿ ಪೊಲೀಸ್ ಕಮಿಷನರ್ ನೂಪುರ್ ಪ್ರಸಾದ್ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಯೋಗಿತಾ ಹಾಗೂ ದೀಪಕ್ ನಡುವೆ ಪ್ರೀತಿ ಬೆಳೆದು ಇಬ್ಬರು ಆರು ತಿಂಗಳಿಂದ ಜತೆಗೂಡಿ ವಾಸಿಸುತ್ತಿದ್ದರು. ಈ ಮಧ್ಯೆ ಯೋಗಿತಾಗೆ ಬೇರೊಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದ್ದು, ಇದರಿಂದ ತೀವ್ರ ನಿರಾಶೆಗೊಂಡಿದ್ದ ದೀಪಕ್ ಯೋಗಿತಾಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
Advertisement