

ನವದೆಹಲಿ: ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಬಿಡುಗಡೆಗೆ ಬಿಜೆಪಿ ಸಂಸದ ಶತ್ರುಜ್ಞ ಸಿನ್ಹಾ ಅವರು ಶನಿವಾರ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕನ್ಹಯ್ಯನಿಗೆ ಜಾಮೀನು ದೊರಕಿರುವುದು ಸಂತಸ ತಂದಿದೆ. ಬಂಧನಕ್ಕೊಳಗಾದಾಗ ಪ್ರತಿಯೊಬ್ಬರು ಕನ್ಹಯ್ಯ ತಪ್ಪಿತಸ್ಥನೆಂದೇ ನೋಡುತ್ತಿದ್ದರು. ತನಗೆ ಸಿಕ್ಕಿರುವ ಬೆಂಬಲಕ್ಕೆ ತಾನು ಯೋಗ್ಯನೆಂದು ಕನ್ಹಯ್ಯ ಸಾಬೀತು ಪಡಿಸುತ್ತಾನೆಂಬುದರ ಬಗ್ಗೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಕನ್ಹಯ್ಯ ಮಾತನಾಡಿರುವುದನ್ನು ನಾನು ಕೇಳಿದ್ದೇನೆ. ದೇಶ ವಿರೋಧಿ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಕನ್ಹಯ್ಯ ಯಾವುದೇ ರೀತಿಯಲ್ಲೂ ಮಾತನಾಡಿಲ್ಲ. ಆತನಿಗೆ ಒಳ್ಳೆಯದಾಗಲಿ ತನಗೆ ಸಿಕ್ಕಿರುವ ಬೆಂಬಲಕ್ಕೆ ತಾನು ಯೋಗ್ಯನೆಂದು ಸಾಬೀತು ಪಡಿಸುತ್ತಾನೆಂದು ನಂಬಿಕೆಯಿದೆ ಎಂದು ಹೇಳಿದ್ದಾರೆ.
ಜೆಎನ್ ಯು ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಸಂಸ್ಥೆಯಾಗಿದ್ದು, ಸಾಕಷ್ಟು ಇತಿಹಾಸವನ್ನು ಹೊಂದಿದೆ. ಇಂತಹ ಸಂಸ್ಥೆಯ ಇದೀಗ ಕೆಲವು ಉನ್ನತ ರಾಜಕಾರಣಿಗಳ ಪ್ರಭಾವದಿಂದ ಬಿಕ್ಕಟ್ಟುಗಳ ತಾಣವಾಗುತ್ತಿದೆ. ಸಂಸ್ಥೆಯೊಂದು ಕಲಿಕೆಯ ತಾಣವಾಗಿದ್ದು, ಭಾರತ ಉಜ್ವಲ ಭವಿಷ್ಯಕ್ಕಾಗಿ ಯುವಕರನ್ನು ಹಾಗೂ ಉತ್ತಮ ಶಿಕ್ಷಕರನ್ನು ಹೊರ ತರುವ ಸಂಸ್ಥೆಯಾಗಿದೆ. ಇದನ್ನು ಸಂರಕ್ಷಿಸಬೇಕಿದೆ ಎಂದು ಹೇಳಿದ್ದಾರೆ.