ಮರಾಠಿಗರಲ್ಲದ ಚಾಲಕರ ಆಟೋಗಳಿಗೆ ಬೆಂಕಿ ಇಡಿ: ರಾಜ್ ಠಾಕ್ರೆ

ಮಹಾರಾಷ್ಟ್ರದಲ್ಲಿ ಮತ್ತೆ ಮರಾಠಿ ವಿವಾದ ತಲೆ ಎತ್ತಿದ್ದು, ಮರಾಠಿಗರಲ್ಲದ ಆಟೋ ಚಾಲಕರ ವಾಹನಗಳನ್ನು ಸುಟ್ಟುಹಾಕುತ್ತೇವೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಬೆದರಿಕೆ ಹಾಕಿದ್ದಾರೆ..
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ (ಸಂಗ್ರಹ ಚಿತ್ರ)
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ (ಸಂಗ್ರಹ ಚಿತ್ರ)

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಮರಾಠಿ ವಿವಾದ ತಲೆ ಎತ್ತಿದ್ದು, ಮರಾಠಿಗರಲ್ಲದ ಆಟೋ ಚಾಲಕರ ವಾಹನಗಳನ್ನು ಸುಟ್ಟುಹಾಕುತ್ತೇವೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ  ರಾಜ್ ಠಾಕ್ರೆ ಬೆದರಿಕೆ ಹಾಕಿದ್ದಾರೆ.

ರಾಜ್ಯದಲ್ಲಿ ಮರಾಠಿ ಅಜೆಂಡಾ ಮುಂದುವರೆಸುವಂತೆ ಎಂಎನ್ಎಸ್ ಕಾರ್ಯಕರ್ತರಿಗೆ ಸೂಚನೆ ನೀಡಿರುವ ರಾಜ್ ಠಾಕ್ರೆ, ಮರಾಠಿಗರಲ್ಲದ ಆಟೋ ಚಾಲಕರ ವಾಹನಗಳನ್ನು ನಿರ್ಧಾಕ್ಷೀಣ್ಯವಾಗಿ  ಸುಟ್ಟುಹಾಕುವಂತೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುದ್ದಿಮಾಧ್ಯಮದೊಂದಿಗೆ ಮಾತನಾಡಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ  ಬಿಜೆಪಿ ಸರ್ಕಾರ ಆಟೋ ತಯಾರು ಮಾಡುವ ಸಂಸ್ಥೆಗೆ ಲಾಭ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಮರಾಠಿಗರಲ್ಲದವರಿಗೂ ತ್ವರಿತವಾಗಿ ಪರವಾನಗಿ ನೀಡುತ್ತಿದೆ. ಇದರಿಂದ ಮರಾಠಿ ಆಟೋ  ಚಾಲಕರಿಗೆ ಅನ್ಯಾಯವಾಗುತ್ತಿದೆ. ಇದೇ ಕಾರಣಕ್ಕೆ ಹೊಸದಾಗಿ ನೊಂದಾವಣೆಯಾಗುವ ಮರಾಠಿಗರಲ್ಲದ ಚಾಲಕರ ಆಟೋಗಳನ್ನು ಸುಟ್ಟುಹಾಕುವಂತೆ ಕಾರ್ಯಕರ್ತರಿಗೆ ಆದೇಶ ನೀಡಿದ್ದೇನೆ  ಎಂದು ಹೇಳಿಕೊಂಡಿದ್ದಾರೆ.

ಎಂಎನ್ಎಸ್ ಗೆ 10 ವರ್ಷ ತುಂಬಿದ ಹಿನ್ನಲೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ, "ಬಿಜೆಪಿ ನೇತೃತ್ವದ ಸರ್ಕಾರ  ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಹನ ತಯಾರಿಕಾ ಸಂಸ್ಥೆಯಿಂದ ಲಂಚ ಪಡೆದು ಮುಂಬೈ ನಗರದಲ್ಲಿ ಸುಮಾರು 70 ಸಾವಿರ ನೂತನ ಆಟೋ ಗಳಿಗೆ ಪರವಾನಗಿ ನೀಡಲು ಮುಂದಾಗಿದೆ.  ಒಂದೊಂದು ಆಟೋ ರಿಕ್ಷಾ ದರ 1.7 ಲಕ್ಷ ರುಗಳಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ವಾಹನ ತಯಾರಿಕಾ ಸಂಸ್ಥೆಗೆ ಭಾರಿ ಲಾಭವಾಗಲಿದೆ".

"ಈ ಹಿಂದೆ ನಾನು ಸ್ಥಳೀಯ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ದಿನವೊಂದಕ್ಕೆ 3, 500 ಪರವಾನಗಿಳನ್ನು ಮಾತ್ರ ನೀಡುವಂತೆ ಕೋರಿದ್ದೆ. ಅದೂ ಕೂಡ ಪರವಾನಗಿ ಪಡೆಯಲಿಚ್ಛಿಸುವವರು  ಕನಿಷ್ಠ 15 ವರ್ಷವಾದರೂ ಮುಂಬೈ ನಗರದ ನಿವಾಸಿಗಳಾಗಿರಬೇಕು. ಇದರ ಅಧಾರದ ಮೇಲೆ ಪರವಾನಗಿ ನೀಡುವಂತೆ ಮನವಿ ಮಾಡಿದ್ದೆ. ಆದರೆ ಸರ್ಕಾರ ಮತ್ತು ಸಾರಿಗೆ ಇಲಾಖೆ ತಮ್ಮ  ಮನವಿಯನ್ನು ತಿರಸ್ಕರಿಸಿ ತ್ವರಿತವಾಗಿ ಪರವಾನಗಿಗಳನ್ನು ನೀಡುತ್ತಿವೆ. ಇದಕ್ಕೆ ಕಾರಣವಾದರೂ ಏನು? ಕೇವಲ ವಾಹನ ತಯಾರಿಕಾ ಸಂಸ್ಥೆಗೆ ಲಾಭ ಮಾಡುವ ಉದ್ದೇಶದಿಂದ ತಾನೆ" ಎಂದು  ಠಾಕ್ರೆ ಪ್ರಶ್ನಿಸಿದ್ದರು.

"ಪ್ರಸ್ತುತ ನೀಡಲಾಗಿರುವ ಪರವಾನಗಿಗಳ ಪೈಕಿ ಶೇ.70ರಿಂದ 72 ರಷ್ಟು ಪರವಾನಗಿಗಳು ಮರಾಠಿಗರಲ್ಲದ ಚಾಲಕರಿಗೆ ನೀಡಲಾಗಿದ್ದು, ಸರ್ಕಾರ ವಾಹನ ತಯಾರಿಕಾ ಸಂಸ್ಥೆಯಿಂದ ಕಿಕ್ ಬ್ಯಾಕ್  ಪಡೆದಿದೆ. ರಾಜ್ಯದಲ್ಲಿ ಮರಾಠಿ ಅಜೆಂಡಾ ಇರುವ ಶಿವಸೇನೆಯ ಸಚಿವರೇ ಸಾರಿಗೆ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದರೂ ಮರಾಠಿಗರ ತೊಂದರೆ ಸರಿಪಡಿಸಲಾಗಿಲ್ಲ. ಇದರಿಂದ ಮರಾಠಿಗರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ರಾಜ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ದಶಕಗಳಿಂದಲೂ ಮಹಾರಾಷ್ಟ್ರದ ಪ್ರಮುಖ ಸಮಸ್ಯೆಯಾಗಿದ್ದ ಮರಾಠಿಗ ಮತ್ತು ಮರಾಠಿಗರಲ್ಲದವರ ನಡುವಿನ ಘರ್ಷಣೆ ಇದೀಗ ಮತ್ತೆ ಭುಗಿಲೆದ್ದಿದ್ದು, ತಮ್ಮ ಮರಾಠಿ ಅಜೆಂಡಾ ಮೂಲಕ ರಾಜ್  ಠಾಕ್ರೆ ಮತ್ತೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com