
ನವದೆಹಲಿ: ಭಾರತ ಸರಕಾರವು ಕಾನೂನು ಬಾಹಿರವಾಗಿ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಲ್ಲ, ಎಂದು ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಫೆಬ್ರವರಿ 22ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಈ ರೀತಿ ಮಾತನಾಡಿರುವ ವಿಡಿಯೊ ಫೆ.27ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದೆ.
ದೇಶದ್ರೋಹ ಆರೋಪದಲ್ಲಿ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಜೈಲು ಸೇರಿ ಬಿಡುಗಡೆಗೊಂಡ ಪ್ರಕರಣ ಇನ್ನೂ ಹಸಿರಾಗಿರುವ ಹೊತ್ತಿನಲ್ಲೇ ಮೆನನ್ ಅವರಿಂದ ವಿವಾದಿತ ಹೇಳಿಕೆ ಹೊರಬಿದ್ದಿದೆ.
''ಕಾಶ್ಮೀರವನ್ನು ಭಾರತವು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿದ್ದು, ಅದನ್ನು ಪ್ರತಿಯೊಬ್ಬರೂ ಒಪ್ಪಿಕೊಂಡಿದ್ದಾರೆ. 'ಟೈಮ್' ಮತ್ತು 'ನ್ಯೂಸ್‌ವೀಕ್'ನಂತಹ ಅಂತಾರಾಷ್ಟ್ರೀಯ ನಿಯತಕಾಲಿಕೆಗಳು ಕಾಶ್ಮೀರದ ನಕ್ಷೆಯನ್ನು ಭಿನ್ನ ರೂಪದಲ್ಲಿ ಪ್ರಕಟಿಸಿವೆ. ಈ ನಿಯತಕಾಲಿಕೆಗಳ ಪ್ರತಿಗಳನ್ನು ಸೆನ್ಸಾರ್ ಮಾಡಲಾಗಿದ್ದು, ಕೆಲವನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
ಇಡೀ ವಿಶ್ವವೇ ಭಾರತವು ಕಾಶ್ಮೀರವನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಮಾತನಾಡಿಕೊಳ್ಳುತ್ತಿರುವಾಗ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಅಲ್ಲಿನ ಜನಗಳ ಭಾವನೆಗಳನ್ನು ಗೌರವಿಸಬೇಕು,'' ಎಂದು ವಿಡಿಯೊದಲ್ಲಿ ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಇನ್ನು ನಿವೇದಿತಾ ಮೆನನ್ ಹೇಳಿಕೆಯನ್ನು ಬಿಜೆಪಿ ಯುವ ಮೋರ್ಚಾ ಹಾಗೂ ಎಬಿವಿಪಿ ಸಂಘಟನೆ ಖಂಡಿಸಿದ್ದು, ನಿವೇದಿತಾ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.
Advertisement