
ಲಖನೌ: ಸೇವೆಯಿಂದ ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ನಿವಾಸದ ಎದುರು ಧರಣಿ ಆರಂಭಿಸಿದ್ದಾರೆ.
ಅಮಾನತುಗೊಂಡಿರುವ ಅಧಿಕಾರಿಗಳ ಬಗ್ಗೆ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿರುವ ಅಮಿತಾಬ್ ಅಖಿಲೇಶ್ ಯಾದವ್ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದರು. ಈ ವೇಳೆ ಪೊಲೀಸರು ತಡೆದಿದ್ದರಿಂದ ರಸ್ತೆ ಮಧ್ಯದಲ್ಲೇ ಧರಣಿ ಆರಂಭಿಸಿದರು.
ಹಿರಿಯ ನಾಗರಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಡಿಐಜಿ ಡಿ.ಕೆ. ಚೌಧರಿ ಅವರನ್ನು ಸೇವೆಯಿಂದ ಅಮಾನತು ಮಾಡಿದ 15 ದಿನಗಳಲ್ಲಿಯೇ ಮರುನೇಮಕ ಮಾಡಿಕೊಳ್ಳಲಾಗಿದೆ. ಆದರೆ, ತಮ್ಮ ಪ್ರಕರಣದಲ್ಲಿ ಸರ್ಕಾರ ಅದೇ ರೀತಿ ನಡೆದುಕೊಳ್ಳದೇ ತಾರತಮ್ಯ ಎಸಗುತ್ತಿದೆ ಎಂದು ಅಮಿತಾಬ್ ಠಾಕೂರ್ ಆರೋಪಿಸಿದ್ದಾರೆ.
ಅನ್ಯಾಯದ ವಿರುದ್ಧ ದನಿ ಎತ್ತಿದ್ದ ತಮ್ಮನ್ನು 2015ರ ಜುಲೈನಲ್ಲಿ ಅಮಾನತು ಮಾಡಲಾಗಿದ್ದು, ಇದುವರೆಗೂ ಮುಂದುವರಿಸಲಾಗಿದೆ. ಆದರೆ, ನಿಯಮದ ಪ್ರಕಾರ ಅಮಾನತು ಆದೇಶವನ್ನು 90 ದಿನಗಳ ಒಳಗಾಗಿ ನವೀಕರಣ ಮಾಡದಿದ್ದರೆ ಅದು ಅನೂರ್ಜಿತವಾಗುತ್ತದೆ ಎಂದು ಡಿಜಿಪಿ ಜಾವೀದ್ ಅಹಮದ್ ಅವರಿಗೆ ಈ ಮೇಲ್ ಮಾಡಿದ್ದಾರೆ.
Advertisement