ಬಾಲ್ಯವಿವಾಹವನ್ನು ತಡೆಗಟ್ಟಿದ ಎಸ್ ಒಎಸ್ ಮೊಬೈಲ್ ಅಪ್ಲಿಕೇಶನ್

ತಂತ್ರಜ್ಞಾನ ಹೇಗೆ 15 ವರ್ಷದ ಬಾಲಕಿಯ ಕನಸುಗಳನ್ನು ರಕ್ಷಿಸಲು ಸಹಾಯ ಮಾಡಿತು ಎಂಬುದಕ್ಕೆ ಈ ಘಟನೆಯೇ...
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಚೆನ್ನೈ: ತಂತ್ರಜ್ಞಾನ ಹೇಗೆ 15 ವರ್ಷದ ಬಾಲಕಿಯ ಕನಸುಗಳನ್ನು ರಕ್ಷಿಸಲು ಸಹಾಯ ಮಾಡಿತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೊಸದಾಗಿ ಆರಂಭಗೊಂಡಿರುವ ಎಸ್ ಒಎಸ್ ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ ನಡೆಯಬೇಕಾಗಿದ್ದ ಬಾಲ್ಯ ವಿವಾಹ ನಿಂತು ಹೋಯಿತು.

ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ಹಳ್ಳಿಯೊಂದರ ನಿರ್ಮಲಾ, ಎಂಟನೇ ತರಗತಿಗೆ ಓದನ್ನು ಅರ್ಧಕ್ಕೇ ನಿಲ್ಲಿಸಿ ನೂಲಿನ ಗಿರಣಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಅವಳ ತಂದೆತಾಯಿ ನೆರೆ ಗ್ರಾಮದ 24 ವರ್ಷದ ಯುವಕನೊಂದಿಗೆ ಆಕೆಯ ಮದುವೆಯನ್ನು ಗೊತ್ತು ಮಾಡಿದ್ದರು. ಮೊನ್ನೆ 6ರಂದು ನಿಗದಿಯಂತೆ ಮದುವೆ ನಡೆಯಬೇಕಾಗಿತ್ತು.

ಆದರೆ ನಿರ್ಮಲಾಗೆ ಈ ಮದುವೆ ಸುತಾರಾಂ ಇಷ್ಟವಿರಲಿಲ್ಲ. ಇದನ್ನು ತನ್ನ ಸ್ನೇಹಿತೆ ವನಿತಾಗೆ ಹೇಳಿದ್ದಳು. ಹೇಗಾದರೂ ನನ್ನ ಮದುವೆ ನಿಂತು ಹೋದರೆ ಸಾಕಪ್ಪಾ ಎಂದು ಕೇಳಿಕೊಂಡಿದ್ದಳಂತೆ. ಮದುವೆಗೆ ಸ್ವಲ್ಪ ದಿನ ಬಾಕಿ ಇರುವಾಗ ನೆಂಟರಿಷ್ಟರನ್ನು ಕರೆಯುವುದು ಅಡೋಲಸೆಂಟ್ ಆಕ್ಷನ್ ಗ್ರೂಪ್ ಎಂಬ ಸರ್ಕಾರೇತರ ಸಂಸ್ಥೆಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಮತ್ತೊಬ್ಬಾಕೆಗೆ ತಿಳಿಯಿತು. ಆಕೆ ಸಂಸ್ಥೆಯ ಮೇಲಾಧಿಕಾರಿಗಳ ಗಮನಕ್ಕೆ ತಂದರು.

ಅವರು ಬಂದು ಸರ್ಕಾರದ ದಾಖಲೆಗಳಿಗೆ ನಿಮ್ಮ ಮಗಳ ಜನನ ಪ್ರಮಾಣ ಪತ್ರ ಬೇಕೆಂದು ಹೇಗೋ ಮನವೊಲಿಸಿ ನಿರ್ಮಲಾಳ ಮನೆಯಲ್ಲಿರುವ ದಾಖಲೆ ಪಡೆದುಕೊಂಡರು. ಅದರಲ್ಲಿ ಅವಳ ವಯಸ್ಸು ಗೊತ್ತಾಯಿತು. ನಂತರ ಎನ್ ಜಿಒ ಕಾರ್ಯಕರ್ತರು ನಿರ್ಮಲಾಳ ದಾಖಲೆಗಳನ್ನು ಮಹಿಳಾ ಹಕ್ಕುಗಳ ನಿಗಾ ಅಪ್ಲಿಕೇಶನ್ ನಲ್ಲಿ ಅಪ್ ಲೋಡ್ ಮಾಡಿದರು. ಮೊಬೈಲ್ ಅಪ್ಲಿಕೇಶನ್ ನನ್ನು ಚೆನ್ನೈನಲ್ಲಿ ಯುನಿಸೆಫ್ ಮತ್ತು ಮೇರಿ ಅನ್ನೆ ಚಾರಿಟಿ ಟ್ರಸ್ಟ್ ಇತ್ತೀಚೆಗೆ ಆರಂಭಿಸಿತ್ತು.

''ನಾವು ಕೂಡಲೇ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದೆವು. ಅವರು ತಕ್ಷಣವೇ ಕಾರ್ಯಪ್ರವೃತ್ತವಾಗಿ ಮದುವೆಯನ್ನು ನಿಲ್ಲಿಸಿದರು ಎನ್ನುತ್ತಾರೆ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕ ಸಿ.ಸಿರಿಲ್ ಅಲೆಕ್ಸಾಂಡರ್.

ಈ ಕಾರ್ಯ ಈಗ ಇಡೀ ಗ್ರಾಮದ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ ಪಾಂಡ್ಯಾನ್, ನಿರ್ಮಲಾಳ ಪೋಷಕರು ಮತ್ತು ಇತರ ಊರವರು, 18 ವರ್ಷಗಳಾಗುವುದರೊಳಗೆ ಹೆಣ್ಣು ಮಕ್ಕಳ ಮದುವೆ ಮಾಡಿಸುವುದಿಲ್ಲ, ಬಾಲ್ಯ ವಿವಾಹಕ್ಕೆ ಒತ್ತಾಯಪಡಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ಹೇಳಿದರು.
(ಗೌಪ್ಯತೆ ಕಾಪಾಡಲು ಇಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com