
ಮುಂಬೈ: ಸಾಲಮರುಪಾವತಿಗಾಗಿ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಹೌಸ್ ಅನ್ನು ಹರಾಜಿಗಿಟ್ಟಿದ್ದ ಎಸ್ ಬಿಐಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನ ಯಾವುದೇ ಬಿಡ್ಡರ್ ಗಳು ಬಿಡ್ ಮಾಡಿಲ್ಲ ಎಂದು ತಿಳಿದುಬಂದಿದೆ.
ಪಶ್ಚಿಮ ಮುಂಬೈನಲ್ಲಿರುವ ಮಲ್ಯ ಅವರ ಮುಂಬೈ ಕಚೇರಿಯನ್ನು 150 ಕೋಟಿ ರು.ಗಳ ಆರಂಭಿಕ ಬೆಲೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹರಾಜಿಗಿಟ್ಟಿತ್ತು. ಆದರೆ ಬ್ಯಾಂಕ್ ನಿಗದಿ ಪಡಿಸಿರುವ ಮೂಲ ಬೆಲೆ ಹೆಚ್ಚಾಯಿತು ಎಂದು ಬಿಡ್ಡರ್ ಗಳು ಬಿಡ್ ಮಾಡದೇ ಉಳಿದಿದ್ದಾರೆ ಎಂದು ರಿಯಾಲಿಟಿ ಮೂಲಗಳು ತಿಳಿಸಿವೆ.
ಕಿಂಗ್ ಫಿಶರ್ ಸುಮಾರು 17ಕ್ಕೂ ಹೆಚ್ಚು ಬ್ಯಾಂಕ್ ಗಳಲ್ಲಿ ಮಲ್ಯ ಸುಮಾರು 6 ಸಾವಿರ ಕೋಟಿ ಸಾಲ ಮಾಡಿಕೊಂಡಿದ್ದು, ಇದೀಗ ಎಲ್ಲ ಬ್ಯಾಂಕುಗಳ ಸೇರಿ ಮಲ್ಯ ಅವರಿಂದ ಕನಿಷ್ಠ ಒಂದು ಬಿಲಿಯನ್ ಡಾಲರ್ ಹಣವನ್ನಾದರೂ ವಸೂಲಿ ಮಾಡಬೇಕು ಎಂದು ಹವಣಿಸುತ್ತಿವೆ. ಇದೇ ಕಾರಣಕ್ಕಾಗಿ ಮಲ್ಯ ಅವರ ಆಸ್ತಿ ಪಾಸ್ತಿಗಳ ಮೇಲೆ ಬ್ಯಾಂಕ್ ಗಳು ಕಣ್ಣಿಟ್ಟಿದ್ದು, ಈ ಹಿಂದೆ ಮಲ್ಯ ಕುಟುಂಬಕ್ಕೆ ಸೇರಿದ್ದ ವಿಮಾನಗಳಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಜಾರಿ ನಿರ್ದೇಶನಾಲಯ ಕೂಡ ಮಲ್ಯ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು.
ಇನ್ನು ಪ್ರಸ್ತುತ ಕಿಂಗ್ ಫಿಶರ್ ಹೌಸ್ ನ ಹರಾಜಿನ ಮೇಲುಸ್ತುವಾರಿಯನ್ನು ಮಹಾರಾಷ್ಟ್ರದ ಎಸ್ ಬಿಐ ಶಾಖೆ ವಹಿಸಿಕೊಂಡಿದ್ದು, ನಿನ್ನೆಯಷ್ಟೇ ಕಿಂಗ್ ಫಿಶರ್ ಹೌಸ್ ಅನ್ನು ಹರಾಜು ಮಾಡುತ್ತಿರುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಇಂದು ಆನ್ ಲೈನ್ ಬಿಡ್ಡಿಂಗ್ ಪ್ರಕ್ರಿಯೆಯನ್ನು ಕೂಡ ಎಸ್ ಬಿಐ ಆರಂಭಿಸಿತ್ತು.
Advertisement