

ಚೆನ್ನೈ: ಚೆನ್ನೈನ ಚೆಂಗಲ್ ಪಟ್ಟು ಬೈಪಾಸ್ ಬಳಿಯ ಕಾರು ಹಾಗೂ ಸರ್ಕಾರಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕೊರಿಯಾ ಮೂಲದ ಎಂಎನ್ಸಿಯ ಹಿರಿಯ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಕೊಲ್ಕತ್ತಾ ಮೂಲದ 52 ವರ್ಷದ ಪ್ರೊಬಿರ್ ಮೈತಿ ಎಂದು ಗುರುತಿಸಲಾಗಿದೆ. ಕಂಪನಿ ಕೆಲಸ ನಿಮಿತ್ತ ಮೈತಿ ಅವರು ಚೆನ್ನೈಗೆ ಆಗಮಿಸಿದ್ದರು. ಚೆನ್ನೈ ಸಿಟಿ ವಿಮಾನ ನಿಲ್ದಾಣಕ್ಕೆ ಬಂದ ಅವರು ಖಾಸಗಿ ಕ್ಯಾಬ್ ಇನೋವಾ ವಾಹನದಲ್ಲಿ ತೆರಳಿದ್ದಾರೆ. ಈ ವೇಳೆ ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ.
ಬೈಸ್ ಪಾಸ್ ರಸ್ತೆಯಲ್ಲಿ ಸರ್ಕಾರಿ ಬಸ್ ನ ಚಾಲಕ ಅತೀ ವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಮೈತಿ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮೈತಿ ಹಾಗೂ ಕಾರು ಚಾಲಕ ಎಲ್. ಜನಾರ್ಧನ್ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.