ಕಂಡಕಂಡ ಬೀದಿ ನಾಯಿಗಳನ್ನು ಕೊಲ್ಲುವ ವಿಕೃತ ಮನಸ್ಸಿನ ಡಾಗ್ ಕಿಲ್ಲರ್

ಸಿಕ್ಕ ಸಿಕ್ಕ ಬೀದಿ ನಾಯಿಗಳನ್ನು ಕೊಂದು ವಿಕೃತ ಆನಂದ ಅನುಭವಿಸುವ ಡಾಗ್ ಕಿಲ್ಲರ್ ಒಬ್ಬ ದಕ್ಷಿಣ ದೆಹಲಿಯ ಶ್ವಾನ ಪ್ರಿಯರಲ್ಲಿ ಆತಂಕ ಮೂಡಿಸಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:  ಸಿಕ್ಕ ಸಿಕ್ಕ ಬೀದಿ ನಾಯಿಗಳನ್ನು ಕೊಂದು ವಿಕೃತ ಆನಂದ ಅನುಭವಿಸುವ ಡಾಗ್ ಕಿಲ್ಲರ್ ಒಬ್ಬ ದಕ್ಷಿಣ ದೆಹಲಿಯ ಶ್ವಾನ ಪ್ರಿಯರಲ್ಲಿ ಆತಂಕ ಮೂಡಿಸಿದ್ದಾನೆ.

ಕಂಡ, ಕಂಡ ಬೀದಿ ನಾಯಿಗಳಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡುವುದು ಈ ಶ್ವಾನಹಂತಕನ ಹವ್ಯಾಸ. ಮಾರ್ಚ್ 15ರಂದು ಮೆಟ್ರೋ ನಿಲ್ದಾಣದ ನಿರ್ಗಮನದ ಬಳಿ ಮೂರು ಬೀದಿನಾಯಿಗಳು ರಕ್ತದ ಮಡುವಿನಲ್ಲಿ ಬಿದ್ದಿವೆಯೆಂದು ಪೊಲೀಸ್ ವ್ಯಾನ್‍ವೊಂದಕ್ಕೆ ಕರೆ ಬಂತು. ಅದೇ ಸ್ಥಳದಲ್ಲಿ ನಾಯಿಮರಿಯೊಂದರ ದೇಹವನ್ನು ಕೂಡ ಪೊಲೀಸರು ಕಂಡು ಬಂತು.

ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ, ಜಾಕೆಟ್ ಮತ್ತು ಚಡ್ಡಿ ತೊಟ್ಟ ವ್ಯಕ್ತಿಯೊಬ್ಬ ದಿಢೀರನೇ ನಾಯಿಗಳ ಮೇಲೆ ದಾಳಿ ಮಾಡಿ ಕೇವಲ 18 ನಿಮಿಷಗಳಲ್ಲಿ ನಾಯಿಗಳ ಪ್ರಾಣ ಬಲಿ ತೆಗೆದುಕೊಂಡಿದ್ದಾನೆ.  
ಮೂರು ನಾಯಿಗಳನ್ನು ಚಾಕುವಿನಿಂದ ಇರಿದು ಬಳಿಕ ನಾಯಿಮರಿಯೊಂದಕ್ಕೆ ಹಲ್ಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.  ಪ್ರಾಣಿಗಳ ವಿರುದ್ಧ ಕ್ರೌರ್ಯ ನಿಯಮಗಳ ಅಡಿಯಲ್ಲಿ ಮತ್ತು ದಂಡ ಸಂಹಿತೆಯ 428 ಮತ್ತು 429 ಸೆಕ್ಷನ್ ಅಡಿಯಲ್ಲಿ ಹೌಜ್ ಕಾಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಈ ಹಿಂದೆ ಇದೇ ಪ್ರದೇಶದಲ್ಲಿ ಹೀಗೆ ನಾಯಿಗಳಿಗೆ ಇರಿದಿರುವ ಇದೇ ರೀತಿಯ ಪ್ರಕರಣಗಳ ಬಗ್ಗೆ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೇ ಆರೋಪಿ ಈ ಪ್ರಕರಣಗಳಲ್ಲಿ ಒಳಗೊಂಡಿರುವ ಕುರಿತು  ಪೊಲೀಸರು ಸಿಸಿಟಿವಿಯ ಹಳೆಯ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಈ ಮಧ್ಯೆ, ಎನ್‌ಜಿಒ ಸಂಸ್ಥೆಯೊಂದು ನಾಯಿ ಹಂತಕನ ಬಗ್ಗೆ ಸುಳಿವು ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com