
ಲಖನೌ: ಹೋಳಿ ಆಚರಣೆ ಸಂದರ್ಭ ತೀವ್ರ ಭದ್ರತೆಯ ನಡುವೆಯೂ ಉತ್ತರ ಪ್ರದೇಶದಾದ್ಯಂತ ಸುಮಾರು 24 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪೊಲೀಸರು, ಹೋಳಿ ಹಬ್ಬದ ದಿನ ರಾಜ್ಯಾದ್ಯಂತ 24ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಪೈಕಿ ಲಖನೌ ನಲ್ಲಿ ನಡೆದ ಭೀಕರ ಅಪಘಾತದಲ್ಲಿ 5 ಮಂದಿ ಸಾವನ್ನಪ್ಪಿದ್ದರೆ, ಬುಲಂದ್ ಶಹರ್ ಬಳಿ ನಡೆದ ಮತ್ತೊಂದು ಅಪಘಾತದಲ್ಲಿ ಬರೊಬ್ಬರಿ 9 ಮಂದಿ ಅಸುನೀಗಿದ್ದಾರೆ. ಎರಡೂ ಅಪಘಾತದಲ್ಲಿ ಚಾಲಕರ ಅತಿಯಾದ ಕುಡಿತವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಇನ್ನು ರಾಜ್ಯದಲ್ಲಿ ಹೋಳಿ ಆಚರಣೆ ವೇಳೆ ವಿವಿಧೆಡ ಸಂಭವಿಸಿದ ಗುಂಪುಘರ್ಷಣೆಗಳ ಕುರಿತು ದೂರುಗಳ ದಾಖಲಾಗಿದ್ದು, ಇಲ್ಲಿಯೂ ಕೂಡ ಸಾಕಷ್ಟು ಸಾವುಗಳು ಸಂಭಿವಿಸಿವೆ. ಆದರೆ ನಿಖರ ಅಂಕಿ ಅಂಶ ಇನ್ನಷ್ಟೇ ಹೊರಬೀಳಬೇಕಿದೆ. ಅಪಘಾತ ಮತ್ತು ಗುಂಪುಘರ್ಷಣೆಯಿಂದ ಸುಮಾರು 252ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವರು ಗಂಭೀರವಾಗಿದ್ದರ, ಮತ್ತೆ ಕೆಲವರು ಸಣ್ಣ ಪುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತೀ ವರ್ಷ ಹೋಳಿ ಆಚರಣೆ ವೇಳೆ ಅಪಘಾತ ಮತ್ತು ಗುಂಪುಘರ್ಷಣೆಯಿಂದಾಗಿ ಉತ್ತರ ಪ್ರದೇಶದಲ್ಲಿ ಹತ್ತಾರು ಮಂದಿ ಸಾವನ್ನಪ್ಪುತ್ತಾರೆ. ಈ ಬಾರಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಪೊಲೀಸರು ಆತಂಕಕ್ಕೆ ಕಾರಣವಾಗಿದೆ. ತೀವ್ರ ಭದ್ರತೆ ಮತ್ತು ರಸ್ತೆಗಳಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿದ್ದರೂ ಸಾವಿನಸಂಖ್ಯೆ ಈ ಪರಿ ಹೆಚ್ಚಿರುವ ಕುರಿತು ಉತ್ತರ ಪ್ರದೇಶ ಪೊಲೀಸ್ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement