
ಹೈದರಾಬಾದ್: ದೇಶದಲ್ಲಿಯೇ ತೆಲಂಗಾಣ ರಾಜ್ಯ ಶಾಸಕರು ಅತ್ಯಂತ ಹೆಚ್ಚು ವೇತನ ಪಡೆಯಲಿದ್ದಾರೆ. ಇತ್ತೀಚೆಗೆ ದೆಹಲಿಯ ಆಪ್ ಸರ್ಕಾರ ತನ್ನ ಶಾಸಕರ ವೇತನವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದರೆ, ಅದಕ್ಕಿಂತಲೂ ಹೆಚ್ಚು ವೇತನ ತೆಲಂಗಾಣ ಶಾಸಕರಿಗೆ ಸಿಗುತ್ತಿದೆ.
ಶಾಸಕರ ವೇತನದ ಹೆಚ್ಚಳ ಪ್ರಸ್ತಾಪ ಮಾಡಿ ತೆಲಂಗಾಣ ವೇತನ ಪಾವತಿ ಮತ್ತು ಅನರ್ಹತೆ (ತಿದ್ದುಪಡಿ) ಪಿಂಚಣಿ ತೆಗೆಯುವಿಕೆ ಬಿಲ್ 2016 ವಿಧಾನಸಭೆಯಲ್ಲಿ ನಿನ್ನೆ ಮಂಡಿಸಲಾಯಿತು.
ಶಾಸಕಾಂಗ ವ್ಯವಹಾರಗಳ ಸಚಿವ ಟಿ.ಹರೀಶ್ ರಾವ್ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪರವಾಗಿ ಮಸೂದೆ ಮಂಡಿಸಿದರು. ಮುಖ್ಯಮಂತ್ರಿಗಳ ಸಂಬಳ ಮತ್ತು ಭತ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಶಾಸಕರ ವೇತನ ಪ್ರತಿ ತಿಂಗಳಿಗೆ 95 ಸಾವಿರದಿಂದ ಎರಡೂವರೆ ಲಕ್ಷದವರೆಗೆ ಏರಿಕೆಯಾಗಲಿದೆ.
ವಿಧಾನಸಭೆಯಲ್ಲಿ ಈ ಕುರಿತು ಇಂದು ಚರ್ಚೆಗೆ ಬರಲಿದೆ. ಮಸೂದೆಗೆ ಅಂಗೀಕಾರ ಸಿಕ್ಕಿದ ಮೇಲೆ ಮುಂದಿನ ತಿಂಗಳಿನಿಂದಲೇ ಜಾರಿಗೆ ಬರಲಿದೆ.
ತಿದ್ದುಪಡಿ ಮಸೂದೆ ಪ್ರಕಾರ, ಮುಖ್ಯಮಂತ್ರಿಗಳ ವೇತನವನ್ನು 16 ಸಾವಿರದಿಂದ 51 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. ಇನ್ನು ಕ್ಷೇತ್ರಾವಾರು ಭತ್ಯೆ ಮುಖ್ಯಮಂತ್ರಿ ಮತ್ತು ಇತರ ಸದಸ್ಯರಿಗೆ 83 ಸಾವಿರದಿಂದ ಎರಡೂವರೆ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ ಮುಖ್ಯಮಂತ್ರಿಗಳು ತಮ್ಮ ವೇತನದಲ್ಲಿ ಮೂರು ಪಟ್ಟು ಹೆಚ್ಚಳ ಪಡೆದರೆ ಶಾಸಕರು ಶೇಕಡಾ 260ರಷ್ಟು ಹೆಚ್ಚು ವೇತನ ಮತ್ತು ಭತ್ಯೆ ಪಡೆಯಲಿದ್ದಾರೆ. ಇದರಿಂದ ರಾಜ್ಯ ಬೊಕ್ಕಸಕ್ಕೆ ವಾರ್ಷಿಕವಾಗಿ 42.67 ಕೋಟಿ ರೂಪಾಯಿ ಹೆಚ್ಚು ಹೊರೆ ಬೀಳಲಿದೆ.
ಪಿಂಚಣಿ ಏರಿಕೆ: ಮೊದಲ ಅವಧಿಯಲ್ಲಿ ಪ್ರತಿ ತಿಂಗಳಿಗೆ 30 ಸಾವಿರ ರೂಪಾಯಿ ಪಿಂಚಣಿ ಏರಿಕೆ, ನಂತರದ ಅವಧಿಯಲ್ಲಿ ಪ್ರತಿ ತಿಂಗಳಿಗೆ ಸಾವಿರ ರೂಪಾಯಿ ಪಿಂಚಣಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ. ಆದರೆ ಪಿಂಚಣಿ ಮೊತ್ತ 50 ಸಾವಿರ ಮೀರಬಾರದು ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಇಲ್ಲಿಯವರೆಗೆ ಶಾಸಕ ತೀರಿಹೋದರೆ ಅವರ ವಿಧವಾ ಪತ್ನಿಯರು ಪಿಂಚಣಿಯ ಅರ್ಧದಷ್ಟು ಮೊತ್ತವನ್ನು ಪಡೆಯುತ್ತಿದ್ದರು. ಆದರೆ ಹೊಸ ಮಸೂದೆಯಲ್ಲಿ ವಿಧವೆ ಪದದ ಬದಲಾಗಿ ಶಾಸಕರ ಪತ್ನಿ ಎಂದು ಬಳಸಲಾಗುತ್ತಿದ್ದು, ಅವರು ಪೂರ್ಣ ಮೊತ್ತದ ಪಿಂಚಣಿ ಪಡೆಯಲಿದ್ದಾರೆ.
ಸೌಲಭ್ಯಗಳ ಸಮಿತಿ ಸದಸ್ಯರು ಮುಖ್ಯಮಂತ್ರಿ ಹಾಗೂ ಶಾಸಕರ ವೇತನ ಹಾಗೂ ಮಾಜಿ ಶಾಸಕರ ಪಿಂಚಣಿ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು.
Advertisement