

ನವದೆಹಲಿ: ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಉತ್ತರಾಖಂಡ್ ನಲ್ಲಿ ಉಚ್ಛಾಟನೆಯನ್ನು ಪ್ರಶ್ನಿಸಿ 9 ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಸುಪ್ರೀಂ ಕೋರ್ಟ್ ಮೇಲ್ಮನವಿಯ ವಿಚಾರಣೆ ನಡೆಸಲಿದೆ.
ಮೇ.9 ರಂದು ಉತ್ತರಾಖಂಡ್ ನ ಉಚ್ಛಾಟಿತ ಕಾಂಗ್ರೆಸ್ ಶಾಸಕರ ಅರ್ಜಿಯನ್ನು ಅಲ್ಲಿನ ಹೈ ಕೋರ್ಟ್ ವಜಾಗೊಳಿಸಿತ್ತು. ಶಾಸಕರ ಪರವಾಗಿ ವಕೀಲ ಸಿಎ ಸುಂದರಂ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ನೇತೃತ್ವದ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಾಹ್ನ 12 :30 ಕ್ಕೆ ಸುಪ್ರೀಂ ಕೋರ್ಟ್ ನ ನ್ಯಾ. ದೀಪಕ್ ಮಿಶ್ರಾ ಹಾಗೂ ನ್ಯಾ. ಶಿವ ಕೀರ್ತಿ ಸಿಂಗ್ ನೇತೃತ್ವದ ವಿಭಾಗೀಯ ಪೀಠ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಲಿದೆ.
ಇದೇ ವೇಳೆ ಉತ್ತಾರಾಖಂಡ್ ನಲ್ಲಿ ವಿಶ್ವಾಸಮತ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ. ಬಹುಮತ ಸಾಬೀತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಶುಕ್ರವಾರದಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಪ್ರಕಾರ ಈ ಪ್ರಕ್ರಿಯೆಯ ವೀಕ್ಷಕರಾಗಿ ಪ್ರಧಾನ ಕಾರ್ಯದರ್ಶಿಯೋಬ್ಬರು ನೇಮಕಗೊಳ್ಳಬೇಕಿದೆ, ಆದರೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಮಾಜಿ ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ಮನವಿ ಮಾಡಿದ್ದು, ಆದೇಶವನ್ನು ಬದಲಾಯಿಸುವಂತೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದೆ.