ನವದೆಹಲಿ: ಪಾಮೋಲಿನ್ ಪ್ರಕರಣದಲ್ಲಿ ಈಗ ಯಾರನ್ನೂ ದೋಷಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ವಿಚಾರಣೆ ಮುಂದುವರಿಸುವಂತೆ ಆದೇಶಿಸಿದೆ.
ಪ್ರಸ್ತುತ ಪ್ರಕರಣದಲ್ಲಿ ತಮ್ಮನ್ನು ದೋಷಮುಕ್ತರನ್ನಾಗಿಸಬೇಕೆಂದು ಕೇರಳದ ಮಾಜಿ ಆಹಾರ ಮಂತ್ರಿ ಟಿಹೆಚ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾಗಿದ್ದ ಜಿಜಿ ಥೋಮ್ಸನ್, ಪಿಜೆ ಥೋಮಸ್ ಮೊದಲಾದವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಅದೇ ವೇಳೆ ರಾಜ್ಯ ಸರ್ಕಾರವನ್ನು ಟೀಕೆಗೊಳಪಡಿಸಿದ ನ್ಯಾಯಾಲಯ, ಕೇರಳ ಸರ್ಕಾರವು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಯತ್ನಿಸಿತ್ತು. ರಿವ್ಯೂ ಅರ್ಜಿ ಹೈಕೋರ್ಟ್‌ನಲ್ಲಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದು ಸುಳ್ಳು ಎಂದು ಮುಖ್ಯ ನ್ಯಾಯಾಧೀಶರು ಹೇಳಿದ್ದಾರೆ.
ಪಾಮೋಲಿನ್ ಹಗರಣಕ್ಕೆ ಸಂಬಂಧಿಸಿದ ಕೇಸ್‌ನ್ನು ಹಿಂಪಡೆಯುವುದಕ್ಕಾಗಿ ಉಮ್ಮನ್ ಚಾಂಡಿ ಕೈಗೊಂಡ ತೀರ್ಮಾನವನ್ನು ಪ್ರಶ್ನಿಸಿ 2007ರಲ್ಲಿ ವಿಎಸ್ ಅಚ್ಯುತಾನಂದನ್ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ವಿರೋಧಿಸಿ ಈ ಆರೋಪಿಗಳು ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿದೆ.
ಏನಿದು ಪ್ರಕರಣ?: 1991ರಲ್ಲಿ ಕೇರಳದಲ್ಲಿ ಕೆ. ಕರುಣಾಕರನ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಲೇಷ್ಯಾ ಕಂಪನಿಯಿಂದ 15,000 ಟನ್ ಪಾಮೋಲಿನ್ ಆಮದು ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಇದು. ಈ ವ್ಯವಹಾರದಲ್ಲಿ ಕೇರಳ ರಾಜ್ಯಕ್ಕೆ ರು.2.31 ಕೋಟಿ ನಷ್ಟ ಸಂಭವಿಸಿತ್ತು ಎಂಬ ಆರೋಪವಿದೆ.