ಭಾರತದ ಮೊದಲ ಸೂಪರ್ ಸಾನಿಕ್ ಕ್ಷಿಪಣಿ ನಿರ್ಭಯ್ ಮತ್ತೆ ಪರೀಕ್ಷೆಗೆ ಸಿದ್ಧ!

ದೇಶೀಯವಾಗಿ ಅಭಿವೃದ್ಧಿಪಡಿಸಿದ ದೇಶದ ಪ್ರಪ್ರಥಮ ಸಬ್ ಸೂಪರ್ ಸಾನಿಕ್ ಕ್ರೂಸರ್ ಕ್ಷಿಪಣಿ ನಿರ್ಭಯ್ ಮತ್ತೆ ಪರೀಕ್ಷೆಗೆ ಸಿದ್ಧವಾಗಿದ್ದು, ಒಡಿಶಾದ ಕರಾವಳಿಯಲ್ಲಿರುವ ರಕ್ಷಣಾ ಪ್ರಯೋಗ ಪ್ರದೇಶದಲ್ಲಿ ಕ್ಷಿಪಣಿ ಪರೀಕ್ಷೆಗೆ ಡಿಆರ್ ಡಿಒ ಮುಂದಾಗಿದೆ.
ನಿರ್ಭಯ್ ಕ್ಷಿಪಣಿ (ಸಂಗ್ರಹ ಚಿತ್ರ)
ನಿರ್ಭಯ್ ಕ್ಷಿಪಣಿ (ಸಂಗ್ರಹ ಚಿತ್ರ)

ಭುವನೇಶ್ವರ್: ದೇಶೀಯವಾಗಿ ಅಭಿವೃದ್ಧಿಪಡಿಸಿದ ದೇಶದ ಪ್ರಪ್ರಥಮ ಸಬ್ ಸೂಪರ್ ಸಾನಿಕ್ ಕ್ರೂಸರ್ ಕ್ಷಿಪಣಿ ನಿರ್ಭಯ್ ಮತ್ತೆ ಪರೀಕ್ಷೆಗೆ ಸಿದ್ಧವಾಗಿದ್ದು, ಒಡಿಶಾದ ಕರಾವಳಿಯಲ್ಲಿರುವ  ರಕ್ಷಣಾ ಪ್ರಯೋಗ ಪ್ರದೇಶದಲ್ಲಿ ಕ್ಷಿಪಣಿ ಪರೀಕ್ಷೆಗೆ ಡಿಆರ್ ಡಿಒ ಮುಂದಾಗಿದೆ.

ಭಾರತದ ಹೆಮ್ಮೆಯ ಕ್ಷಿಪಣಿ ಬ್ರಹ್ಮೋಸ್ ಗೆ ಪರ್ಯಾಯ ಎಂದೇ ಕರೆಯಲಾಗುತ್ತಿದ್ದ ನಿರ್ಭಯ್ ಕ್ಷಿಪಣಿ ಸಿದ್ಧವಾಗಿ ದಶಕಗಳೇ ಕಳೆದರೂ ಈವರೆಗೆ ನಡೆದ ಎಲ್ಲ ಪರೀಕ್ಷಾರ್ಥ ಪ್ರಯೋಗಗಳಲ್ಲಿ  ಅದು ವಿಫಲವಾಗಿತ್ತು. ಆದರೆ ಕ್ಷಿಪಣಿ ಪ್ರಯೋಗ ವಿಫಲದಿಂದ ದೃತಿಗೆಡದ ನಮ್ಮ ಡಿಆರ್ ಡಿಒ ವಿಜ್ಞಾನಿಗಳು ಮತ್ತೆ ಕ್ಷಿಪಣಿಯನ್ನು ಪರೀಕ್ಷೆಗೆ ಸಿದ್ದಪಡಿಸಿದ್ದು, ಕ್ಷಿಪಣಿಯಲ್ಲಿನ ತಾಂತ್ರಿಕ  ಸಮಸ್ಯೆಗಳನ್ನು ಬಗೆಹರಿಸಿರುವುದಾಗಿ ಹೇಳಿದ್ದಾರೆ.



ಇನ್ನು ಈ ‘ನಿರ್ಭಯ್’ ಕ್ಷಿಪಣಿಯ ಮೂರನೇ ಪ್ರಯೋಗಾರ್ಥ ಹಾರಾಟ ವಿಫಲವಾದ ಕುರಿತು ಕೇಂದ್ರ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆಯಾಗುವ ಮುನ್ನವೇ ಡಿಆರ್‌ಡಿಒ ವಿಜ್ಞಾನಿಗಳು ಕ್ಷಿಪಣಿಯ  ಮರು ಪರೀಕ್ಷಾರ್ಥ ಹಾರಾಟ ನಡೆಸಲು ಮುಂದಾಗಿದ್ದಾರೆ. ಒಡಿಶಾ ಕರಾವಳಿ ಬದಿಯ ರಕ್ಷಣಾ ಪ್ರಯೋಗ ಪ್ರದೇಶದಲ್ಲಿ ನಿರ್ಭಯ್ ಕ್ಷಿಪಣಿಯ ಉಡಾವಣೆಯನ್ನು ಮರು ಪರೀಕ್ಷೆಗೆ ಒಳಪಡಿಸಲು  ಡಿಆರ್‌ಡಿಒ ಯೋಜನೆ ರೂಪಿಸಿದೆ.

ಕೆಳಮಟ್ಟದಲ್ಲಿ ಹಾರುತ್ತಾ ನಿರಂತರ ನಿರ್ದೇಶನ ಪಡೆಯುವ ಕ್ಷಿಪಣಿ ನಿರ್ಭಯ್ ಕ್ಷಿಪಣಿಯು ಸುಮಾರು 750ರಿಂದ 1000 ಕಿ.ಮೀ. ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಕ್ಷಿಪಣಿ  ಮಾದರಿಯನ್ನು ನೋಡಿದ್ದ ತಜ್ಞರು ಇದನ್ನು ಆರಂಭದಲ್ಲಿ ಅಮೆರಿಕದ ಅತ್ಯಂತ ಶಕ್ತಿಶಾಲಿ ಟೊಮಾಹಾಕ್ ಕ್ಷಿಪಣಿಗೆ ಹೋಲಿಕೆ ಮಾಡಿದ್ದರು. ಎರಡು ಹಂತಗಳ ಈ ಕ್ಷಿಪಣಿ 6 ಮೀಟರ್ ಉದ್ದ, 0.52  ಮೀ. ಸುತ್ತಳತೆ, 2.7 ಮೀಟರ್ ರೆಕ್ಕೆಗಳ ವಿಸ್ತೀರ್ಣದೊಂದಿಗೆ ಒಟ್ಟು 1,500 ಕೆಜಿ ತೂಕ ಹೊಂದಿದೆ. ಈ ಕ್ಷಿಪಣಿಯನ್ನು ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್  ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ವಿನ್ಯಾಸಗೊಳಿಸಿದ್ದು, ಬಳಿಕ ಈ ಕ್ಷಿಪಣಿಯನ್ನು ಡಿಆರ್‌ಡಿಒದ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ಭಾರತದ ಈ ಪ್ರಮುಖ ಮತ್ತು ವಿಧ್ವಂಸಕ ಕ್ಷಿಪಣಿಯನ್ನು ಮೊದಲ ಬಾರಿಗೆ 2013ರ ಮಾರ್ಚ್ 12ರಂದು ಮತ್ತು 2014 ಅಕ್ಟೋಬರ್ 17ರಂದು ಎರಡನೇ ಬಾರಿಗೆ ಪರೀಕ್ಷೆ ನಡೆಸಲಾಗಿತ್ತು. ಆದರೆ  ತಾಂತ್ರಿಕ ದೋಷದಿಂದಾಗಿ ಈ ಎರಡೂ ಪರೀಕ್ಷೆಗಳು ವಿಫಲವಾಗಿದ್ದವು. ನಂತರ ಸುಮಾರು 1 ವರ್ಷಗಳ ಅವಧಿಯಲ್ಲಿ ಮತ್ತೆ ಪ್ರಯೋಗಕ್ಕೆ ಮುಂದಾದ ಡಿಆರ್ ಡಿಒ ಕ್ಷಿಪಣಿಯಲ್ಲಿ ತಾಂತ್ರಿಕ  ದೋಷಗಳನ್ನು ಸರಿಪಡಿಸಿ ಮತ್ತೆ ಮೂರನೇ ಬಾರಿಗೆ ಅಂದರೆ 2015ರ ಅಕ್ಟೋಬರ್ 16ರಂದು ಪರೀಕ್ಷೆ ನಡೆಸಲಾಯಿತು. ಆದರೆ ಆರಂಭಿಕ ಹಂತದಲ್ಲಿ ಕ್ಷಿಪಣಿ ಸರಿಯಾದ ಮಾರ್ಗದಲ್ಲೇ  ಚಲಿಸುತ್ತಿತ್ತಾದರೂ, ಹಾರಾಟದ ವೇಳೆ ಕ್ಷಿಪಣಿ ನಿರ್ದೇಶಿತ ಹಾದಿ ಬಿಟ್ಟು ಬೇರೆ ಹಾದಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು.

ಈ ಪರೀಕ್ಷೆ ವಿಫಲವಾದ ಕುರಿತು ಸರ್ಕಾರ ವರದಿ ಕೇಳಿತ್ತು. ತನಿಖೆ ನಡೆಸಿ ವರದಿ ಸಲ್ಲಿಸುವ ಸಲುವಾಗಿ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್‌ಎಎಲ್) ನಿರ್ದೇಶಕ ಶ್ಯಾಮ್ ಶೆಟ್ಟಿ  ನೇತೃತ್ವದ ಸಮಿತಿ ರಚಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಆ ಸಮಿತಿ ತನಿಖಾ ವರದಿ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ,ಡಿಆರ್‌ಡಿಒ ವಿಜ್ಞಾನಿಗಳು ಕ್ಷಿಪಣಿಯಲ್ಲಿ ತಾಂತ್ರಿಕ  ಲೋಪದೋಷಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಕ್ಷಿಪಣಿಯನ್ನು ಜೂನ್‌ನಲ್ಲಿ ಉಡಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಈಗ  ನಡೆಸುವ ಪ್ರಯೋಗದಲ್ಲಿ ಕ್ಷಿಪಣಿ ಹಸಿರು ನಿಶಾನೆ ಪಡೆಯದಿದ್ದಲ್ಲಿ ಮತ್ತೊಮ್ಮೆ ಅಕ್ಟೋಬರ್‌ನಲ್ಲಿ ಪ್ರಯೋಗ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ ಕ್ಷಿಪಣಿಯಲ್ಲಿನ ತಾಂತ್ರಿಕ ದೋಷ ಸರಿಪಡಿಸಿರುವ ಕುರಿತು ವಿಶ್ವಾಸ ವ್ಯಕ್ತಪಡಿಸಿರುವ ವಿಜ್ಞಾನಿಗಳು ನಾಲ್ಕನೇ ಬಾರಿಯ ಪರೀಕ್ಷೆಯಲ್ಲಿ ಕ್ಷಿಪಣಿ ಯಶಸ್ವಿಯಾಗುವ ಕುರಿತು ವಿಶ್ವಾಸ  ವ್ಯಕ್ತಪಡಿಸಿದ್ದಾರೆ.  ಒಡಿಶಾದ ಕರಾವಳಿ ತೀರದಲ್ಲಿ ಈಗಾಗಲೇ ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಶೀಘ್ರದಲ್ಲೇ ಡಿಆರ್ ಡಿಒ ಪರೀಕ್ಷಾರ್ಥ  ಪ್ರಯೋಗದ ದಿನಾಂಕ ನಿಗದಿ ಮಾಡಲಿದೆ.

ಹೇಗೆ ನಡೆಯುತ್ತೆ ಪರೀಕ್ಷೆ
ಇನ್ನು ತೀವ್ರ ಕುತೂಹಲ ಕೆರಳಿಸಿರುವ ನಿರ್ಭಯ್ ಕ್ಷಿಪಣಿ ಪರೀಕ್ಷೆ, ಕೇವಲ ವಿಜ್ಞಾನಿಗಳಲ್ಲಿ ಮಾತ್ರವಲ್ಲದೇ ಇದೀಗ ದೇಶದ ಜನರ ಗಮನ ಸೆಳೆದಿದೆ. ಈ ಹಿಂದೆ ನಡೆದ ಮೂರು ಪ್ರಯೋಗಗಳು  ವಿಫಲವಾದ ಹಿನ್ನಲೆಯಲ್ಲಿ ನಾಲ್ಕನೇ ಪ್ರಯೋಗದ ಮೇಲೆ ಭಾರಿ ನಿರೀಕ್ಷೆಗಳಿದ್ದು, ಪರೀಕ್ಷೆಗಾಗ ಕುತೂಹಲದಿಂದ ಕಾಯುವಂತಾಗಿದೆ. ನಿರ್ಭಯ್ ಕ್ಷಿಪಣಿ ಭೂ ಮೇಲ್ಮೈಯಿಂದ ಮೇಲಕ್ಕೆ ಸಾಗಬಲ್ಲ  ಕ್ಷಿಪಣಿಯಾಗಿದ್ದು, ಕೇವಲ ನೆಲ ಮಾತ್ರವಲ್ಲದೇ ಸಮುದ್ರ, ಆಕಾಶದಿಂದ ಉಡಾವಣೆಗೊಳ್ಳಬಲ್ಲಂತಹ ಸಾಮರ್ಥ್ಯವನ್ನು ಹೊಂದಿದೆ. ಇಂತಹ ಕ್ಷಿಪಣಿಗಳ ಪರೀಕ್ಷೆ ನಡೆದಾಗ ಭಾರತೀಯ  ವಾಯುಸೇನೆಯ ಅತ್ಯಂತ ವೇಗದ ಯುದ್ಧ ವಿಮಾನಗಳಾದ ಸುಖೋಯ್ ಅಥವಾ ಜಾಗ್ವಾರ್ ಯುದ್ಧ ವಿಮಾನಗಳು ಕ್ಷಿಪಣಿ ಉಡಾವಣೆಯಾಗುತ್ತಿದ್ದಂತೆಯೇ ಅದನ್ನು ಹಿಂಬಾಲಿಸುತ್ತದೆ.  ಒಂದೊಮ್ಮೆ  ಕ್ಷಿಪಣಿ ಅವುಗಳನ್ನು ಹಿಂದಿಕ್ಕಿ ನಿರ್ಧಿಷ್ಟ ದಿಕ್ಕಿನಲ್ಲಿ ನಿರ್ಧಿಷ್ಟ ಸಮಯದಲ್ಲಿ ಸಾಗಿದಲ್ಲಿ ಪರೀಕ್ಷೆ ಯಶಸ್ವಿಯಾಗುತ್ತದೆ. ಈ ಮೂಲಕ ಕ್ಷಿಪಣಿಯ ಶಕ್ತಿ, ಸಾಮರ್ಥ್ಯವನ್ನು ಅರಿಯಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com