
ಬಾಲಸೋರ್: ಶುತ್ರು ರಾಷ್ಟ್ರಗಳ ಎಂತಹುದೇ ಪ್ರಬಲ ಕ್ಷಿಪಣಿಗಳಿಗೆ ಇನ್ನು ಮುಂದೆ ಭಾರತ ಹೆದರುವ ಅವಶ್ಯಕತೆ ಇಲ್ಲ. ಆಕಾಶ ಮಾರ್ಗವಾಗಿ ಹಾರಿ ಬರುವ ಕ್ಷಿಪಣಿಗಳನ್ನು ಅಗಸದಲ್ಲಿಯೇ ಹೊಡೆದುರುಳಿಸಬಲ್ಲ ಪ್ರಳಯಾಂತಕ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ಭಾರತೀಯ ಸೇನೆಯ ಬತ್ತಳಿಕೆ ಸೇರಲು ಸಿದ್ಧವಾಗಿದೆ.
ಚೀನಾ ಹಾಗೂ ಪಾಕಿಸ್ತಾನದಿ೦ದ ನಿರ೦ತರವಾಗಿ ಭದ್ರತಾ ಆತ೦ಕ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ರಕ್ಷಣೆಗಾಗಿ ಸ್ವದೇಶಿ ತ೦ತ್ರಜ್ಞಾನ ಹೊ೦ದಿರುವ ಕ್ಷಿಪಣಿ ನಿರೋಧಕ ವ್ಯವಸ್ಥೆ ರೂಪಿಸಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ ರೂಪುಗೊಂಡಿರುವ ಈ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯ ಪರೀಕ್ಷೆ ಭಾನುವಾರ ನಡೆಸಲಾಗಿತ್ತು. ಈ ಪರೀಕ್ಷೆ ಅಭೂತ ಪೂರ್ವ ಯಶಸ್ವಿಯಾಗಿದ್ದು, ಭಾರತದತ್ತ ಹಾರಿಸಿದ ಪೃಥ್ವಿ ಕ್ಷಿಪಣಿಯನ್ನು ಆಗಸದಲ್ಲಿಯೇ ಹೊಡೆದುರುಳಿಸುವ ಮೂಲಕ ತನ್ನ ಸಾಮರ್ಥ್ಯವೇನು ಎಂಬುದನ್ನು ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ಸಾಬೀತು ಪಡಿಸಿದೆ.
ಭಾನುವಾರ ಬೆಳಗ್ಗೆ ಸುಮಾರು 11.15ಕ್ಕೆ ಬ೦ಗಾಳಕೊಲ್ಲಿಯಲ್ಲಿ ಪರೀಕ್ಷೆಗೆಂದೇ ನಿಯೋಜಿಸಲಾಗಿದ್ದ ಹಡಗಿನಿ೦ದ ಪೃಥ್ವಿ ಕ್ಷಿಪಣಿಯನ್ನು ಭಾರತದತ್ತ ಗುರಿ ಮಾಡಿಸಿ ಉಡಾಯಿಸಲಾಗಿತ್ತು. ಮತ್ತೊಂದೆಡೆ ಒಡಿಶಾ ಕಡಲ ತೀರದ ಅಬ್ದುಲ್ ಕಲಾ೦ ದ್ವೀಪದಲ್ಲಿರುವ ಅಡ್ವಾನ್ಸ್ ಡ್ ಏರ್ ಡಿಫೆನ್ಸ್ ನ ರಾಡಾರ್ ಮೂಲಕ ಈ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಕ್ಷಿಪಣಿಯನ್ನು ಭಾರತದತ್ತ ನುಗ್ಗಿ ಬರುತ್ತಿದ್ದ ಪೃಥ್ವಿ ಕ್ಷಿಪಣಿಗೆ ಗುರಿ ಮಾಡಿ ಉಡಾಯಿಸಲಾಯಿತು. ಉಡಾವಣೆಯಾದ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ನಿಗದಿತ ವೇಗದಲ್ಲಿ, ನಿಗದಿತ ಸಮಯದಲ್ಲಿ ಗುರಿಯತ್ತ ಮುನ್ನುಗ್ಗಿ ಪೃಥ್ವಿ ಕ್ಷಿಪಣಿಯನ್ನು ಕ್ಷಣಾರ್ಧದಲ್ಲೇ ಆಗಸದಲ್ಲಿಯೇ ಛಿದ್ರಗೊಳಿಸಿತು. ಆ ಮೂಲಕ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ತನ್ನ ಸಾಮರ್ಧ್ಯವನ್ನು ಇಡೀ ವಿಶ್ವಕ್ಕೇ ತೋರ್ಪಡಿಸಿದೆ ಎಂದು ರಕ್ಷಣಾ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸುಮಾರು 7.5 ಮೀಟರ್ ಉದ್ದವಿರುವ ಇ೦ಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯು, ನ್ಯಾವಿಗೇಷನ್ ವ್ಯವಸ್ಥೆ, ಅತ್ಯಾಧುನಿಕ ಕ೦ಪ್ಯೂಟರ್, ಮೊಬ್ಯೆಲ್ ಲಾ೦ಚರ್, ಸುರಕ್ಷಿತ ಡೇಟಾ ಲಿ೦ಕ್, ಅತ್ಯಾಧುನಿಕ ರಾಡಾರ್ ಮತ್ತಿತರ ತ೦ತ್ರಜ್ಞಾನಗಳನ್ನು ಹೊ೦ದಿದೆ. ಇವುಗಳ ಸಹಾಯದಿಂದ ಭಾರತದತ್ತ ನುಗ್ಗಿ ಬರುವ ಕ್ಷಿಪಣಿಗಳನ್ನು ಗುರುತಿಸಿ ಅವುಗಳು ಗುರಿ ತಲುಪುವ ಮುನ್ನವೇ ಆಗಸದಲ್ಲಿಯೇ ಛಿದ್ರಗೊಳಿಸುವ ಸಾಮರ್ಥ್ಯ ಈ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಗಿದೆ.
ಏನಿದು ಯೋಜನೆ?
ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದುವ ಭಾರತದ ಕನಸು ದಶಕಗಳಿಂದಲೂ ನನಸಾಗಿಯೇ ಇತ್ತು. ಈ ಹಿನ್ನಲೆಯಲ್ಲಿ ಸಂಶೋಧನೆ ಕೈಗೊಂಡಿದ್ದ ಡಿಆರ್ ಡಿಒದ ರಕ್ಷಣಾ ವಿಭಾಗದ ವಿಜ್ಞಾನಿಗಳು ಸ೦ಪೂಣ೯ ಸ್ವದೇಶಿ ತ೦ತ್ರಜ್ಞಾನ ಹೊ೦ದಿದ "ಕ್ಷಿಪಣಿ ನಿರೋಧಕ ಬಹುಸ್ತರದ ವ್ಯವಸ್ಥೆ" ಸಂಶೋಧಿಸುವ ಕಾರ್ಯಕ್ಕೆ ಮುದಾಗಿದ್ದರು. ವಿಜ್ಞಾನಿಗಳ ಶ್ರಮಕ್ಕೆ ಪ್ರತಿಫಲವಾಗಿ ಇದೀಗ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ಸಿದ್ಧವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಕೂಡ ಇಂತಹ ವ್ಯವಸ್ಥೆ ಹೊಂದಿದ ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿ ಸೇರಲಿದೆ.
ಈಗಾಗಲೇ ಈ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ಬರೊಬ್ಬರಿ 12 ಬಾರಿ ಪ್ರಾಯೋಗಿಕ ಪರೀಕ್ಷೆಗೆ ಒಳಗಾಗಿದ್ದು, ಬಹುತೇಕ ಯಶಸ್ಸು ಸಾಧಿಸಿದೆ. 2006ರಲ್ಲಿ ಇದರ ಮೊದಲ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಆ ಬಳಿಕ ಈವರೆಗೂ 12 ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಬಹುತೇಕ ಯಶಸ್ವಿಯಾಗಿವೆ. 5 ಸಾವಿರ ಕಿ.ಮೀ. ದೂರ ಕ್ರಮಿಸಬಲ್ಲ ಸಾಮರ್ಥ್ಯವಿರುವ ಪ್ರಬಲ ಕ್ಷಿಪಣಿಗಳನ್ನು ಕೂಡ ಆಕಾಶದಲ್ಲೇ ಹೊಡೆದುರುಳಿಸುವ ವ್ಯವಸ್ಥೆ ಇದಾಗಿದೆ.
ಇಂತಹ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಪ್ರಸ್ತುತ ಅಮೆರಿಕ, ರಷ್ಯಾ ಹಾಗೂ ಇಸ್ರೇಲ್ ದೇಶಗಳ ಬಳಿ ಮಾತ್ರವಿದ್ದು, ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಇಂತಹ ವ್ಯವಸ್ಥೆ ಅಳವಡಿಸಿಕೊಂಡ ರಾಷ್ಟ್ರಗಳ ಪಟ್ಟಿಗೆ ಭಾರತ ನಾಲ್ಕನೇ ರಾಷ್ಟ್ರವಾಗಿ ಸೇರ್ಪಡೆಯಾಗಲಿದೆ.
Advertisement