ನವದೆಹಲಿ: ಕೇರಳ ಜನತೆ ಯುಡಿಎಫ್ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದ ವಿರುದ್ಧ ಮತ ಹಾಕಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಅವರು ಗುರುವಾರ ಹೇಳಿದ್ದಾರೆ.
ಕೇರಳದಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯೆಚುರಿ, ತಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ ಅಧಿಕಾರಕ್ಕೆ ತಂದ ಕೇರಳ ಜನತೆಯನ್ನು ಅಭಿನಂದಿಸಿದರು, ಅಲ್ಲದೆ ತಮ್ಮ ಪಕ್ಷ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ ಎಂದರು.
'ಎಲ್ ಡಿಎಫ್ ಮೇಲೆ ವಿಶ್ವಾಸವಿಟ್ಟಿದ್ದಕೆ ಕೇರಳ ಜನತೆಗೆ ನಾನು ನಮಸ್ಕರಿಸುತ್ತೇನೆ ಮತ್ತು ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ಭರವಸೆ ನೀಡುತ್ತೇನೆ' ಎಂದರು.
ಕೇರಳದಲ್ಲಿ ಕೋಮುವಾದಿ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ಫಲಿತಾಂಶ ಉತ್ತರ ನೀಡಿದೆ ಎಂದು ಸೀತಾರಾಂ ಯೆಚುರಿ ಅವರು ಹೇಳಿದ್ದಾರೆ.
140 ಸದಸ್ಯ ಬಲವನ್ನು ಹೊಂದಿರುವ ಕೇರಳ ವಿಧಾನಸಭೆಯಲ್ಲಿ ಎಲ್ ಡಿಎಫ್ 90 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.