"ಬಯಸಿದ್ದರೆ 1964ಕ್ಕೂ ಮೊದಲೇ ಭಾರತ ಅಣ್ವಸ್ತ್ರ ರಾಷ್ಟ್ರವಾಗುತ್ತಿತ್ತು"

ಭಾರತ ದೇಶದ ಸರ್ಕಾರ ಬಯಸಿದ್ದರೆ 1964ಕ್ಕೂ ಮೊದಲೇ ಅಣ್ವಸ್ತ್ರ ರಾಷ್ಟ್ರವಾಗುತ್ತಿತ್ತು ಎಂದು ಅಮೆರಿಕದ ಗುಪ್ತಚರ ವರದಿಯೊಂದು ಹೇಳಿದೆ...
ಪರಮಾಣು ಪರೀಕ್ಷೆ (ಸಂಗ್ರಹ ಚಿತ್ರ)
ಪರಮಾಣು ಪರೀಕ್ಷೆ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಭಾರತ ದೇಶದ ಸರ್ಕಾರ ಬಯಸಿದ್ದರೆ 1964ಕ್ಕೂ ಮೊದಲೇ ಅಣ್ವಸ್ತ್ರ ರಾಷ್ಟ್ರವಾಗುತ್ತಿತ್ತು ಎಂದು ಅಮೆರಿಕದ ಗುಪ್ತಚರ ವರದಿಯೊಂದು ಹೇಳಿದೆ.

1964 ಮೇ 14ರಂದು ಅಮೆರಿಕ ಗುಪ್ತಚರ ಇಲಾಖೆ ಬಿಡುಗಡೆ ಮಾಡಿರುವ ಈ ವರದಿ ಇದೀಗ ಬಹಿರಂಗವಾಗಿದ್ದು, ಅಂದೇ ಅಮೆರಿಕದ ಗುಪ್ತಚರ ಇಲಾಖೆ ಭಾರತ ಪರಮಾಣು ಸಾಮರ್ಥ್ಯ  ಹೊಂದಿರುವ ಕುರಿತು ಶಂಕೆ ವ್ಯಕ್ಚಪಡಿಸಿತ್ತು ಎಂದು ತಿಳಿದುಬಂದಿದೆ. ರಾಷ್ಟ್ರೀಯ ಭದ್ರತಾ ಸಂಗ್ರಹಾಲಯ ಮತ್ತು ಅಂತಾರಾಷ್ಟ್ರೀಯ ಪರಮಾಣು ಪ್ರಸರಣ ಇತಿಹಾಸ ಯೋಜನೆ ಸಂಗ್ರಹಿಸಿರುವ  ಹಳೆಯದಾದ ಕಡತಗಳಲ್ಲಿ ಅಂದಿನ ಅಮೆರಿಕದ ಗುಪ್ತಚರ ಇಲಾಖೆ ಭಾರತದ ಪರಮಾಣು ಯೋಜನೆ ಕುರಿತು ಉಲ್ಲೇಖಿಸಿದೆ.

ಅಂದು ಗುಪ್ತಚರ ಇಲಾಖೆ ಅಮೆರಿಕ ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ ಭಾರತ ದೇಶ ಪರಮಾಣು ಶಸ್ತ್ರಾಸ್ತ್ರ ತಯಾರಿಸುವ ಸ್ಥಿತಿಯಲ್ಲಿದೆ. ಆದರೆ ತಮಗೆ ಈ ವರೆಗೂ ಭಾರತ ಪರಮಾಣು ಶಸ್ತ್ರಾಸ್ತ್ರ  ತಯಾರಿಸುತ್ತಿರುವ ಕುರಿತು ಯಾವುದೇ ಕುರುಹುಗಳು ಲಭ್ಯವಾಗಿಲ್ಲ. ಆದರೆ ಪರಮಾಣು ಯೋಜನೆ ಕುರಿತಂತೆ ಭಾರತದಲ್ಲಿ ಕೆಲ ಶಂಕಿತ ಘಟನೆಗಳು ನಡೆಯುತ್ತಿದ್ದು, ಟ್ರಾಂಬೆಯಲ್ಲಿರುವ  ಕೆನಡಾ-ಭಾರತ ನ್ಯೂಕ್ಲಿಯರ್ ರಿಯಾಕ್ಟರ್ ಘಟಕದಲ್ಲಿನ ಇಂಧನವನ್ನು ಪ್ರತೀ ಆರು ತಿಂಗಳಿಗೊಮ್ಮೆ ಬದಲಾಯಿಸಲಾಗುತ್ತಿದೆ. ಇದು ಭಾರತ ಪರಮಾಣು ಶಸ್ತ್ರಾಸ್ತ್ರ ತಯಾರಿಸುತ್ತಿದೆಯೇ ಎಂಬ  ಅನುಮಾನ ಹುಟ್ಟುಹಾಕಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಅಂತೆಯೇ ಪತ್ರದಲ್ಲಿ ಭಾರತ ಪರಮಾಣು ಶಸ್ತ್ರಾಸ್ತ್ರ ತಯಾರಿಸುವ ಉನ್ನತ ಸ್ಥಿತಿಯಲ್ಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ಲುಟೋನಿಯಂ ಅಥವಾ ಅದಕ್ಕಿಂತಲೂ ಕೆಳಮಟ್ಟದ ಪರಮಾಣು ಶಸ್ತ್ರಾಸ್ತ್ರ ತಯಾರಿಸುವ ಸಾಮರ್ಥ್ಯ ಭಾರತಕ್ಕಿದ್ದು, ಭಾರತದ ಶಸ್ತ್ರಾಸ್ತ್ರ ಮತ್ತು ಸಂಶೋಧನಾ ವಿಭಾಗ ಈ ಬಗ್ಗೆ ಮುಂದಿನ  ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಸಭೆಯಲ್ಲಿ ಪರಮಾಣು ಶಸ್ತ್ರಾಸ್ತ್ರ ಹೊಂದುವ ಕುರಿತು ನಿರ್ಧಾರ ಕೈಗೊಂಡಿದ್ದೇ ಆದರೆ ವಿಶ್ವದ ರಾಜಕೀಯದಲ್ಲಿ ಇದು ಪ್ರಮುಖ  ಬೆಳವಣಿಗೆಯಾಗಲಿದೆ. ತಮಗೆ ದೊರೆತಿರುವ ಮಾಹಿತಿಯನ್ವಯ ಕೆನಡಾ-ಭಾರತ ನ್ಯೂಕ್ಲಿಯರ್ ರಿಯಾಕ್ಟರ್ ಘಟಕ ಸತತವಾಗಿ ಕಾರ್ಯ ನಿರ್ವಹಿಸುತ್ತಿದೆಯಾದರೂ ಅಲ್ಲಿ ಪ್ಲುಟೋನಿಯಂ  ಅಥವಾ ಅದಕ್ಕಿಂತಲೂ ಕೆಳಮಟ್ಟದ ಶಸ್ತಾಸ್ತ್ರ ತಯಾರಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಅಂತೆಯೇ ಭಾರತಕ್ಕೆ ಪ್ಲುಟೋನಿಯಂ ಶಸ್ತ್ರಾಸ್ತ್ರ ತಯಾರಿಸುವ ಯಾವುದೇ ಅವಶ್ಯಕತೆ ನಮಗೆ ಕಾಣಿಸುತ್ತಿಲ್ಲ. ವೈಜ್ಞಾನಿಕ ಬಳಕೆಗಾಗಿ ನ್ಯೂಕ್ಲಿಯರ್ ರಿಯಾಕ್ಟರ್ ಅನ್ನು ಬಳಕೆ  ಮಾಡುತ್ತಿರುಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ.

ಒಟ್ಟಾರೆ ಅಮೆರಿಕದ ಗುಪ್ತಚರ ಇಲಾಖೆ ನೀಡಿರುವ ವರದಿಯನ್ವಯ ಭಾರತ 1964ಕ್ಕೂ ಮೊದಲೇ ಪರಮಾಣು ಶಸ್ತ್ರಾಸ್ತ್ರ ಹೊಂದುವ ಸಾಮರ್ಥ್ಯ ಹೊಂದಿತ್ತು ಎಂದು ತಿಳಿದುಬಂದಿದೆ. 1945ರ  ಆಗಸ್ಟ್ ನಲ್ಲಿ ಅಮೆರಿಕ ಜಪಾನ್ ನ ಹಿರೋಷಿಮಾ-ನಾಗಸಾಕಿ ನಗರಗಳ ಮೇಲೆ ಮೊಟ್ಟಮೊದ ಅಣುಬಾಂಬ್ ದಾಳಿ ನಡೆಸಿತ್ತು. ಭಾರತ 1974 ಮೇ18ರಂದು ಭಾರತ ಮೊಟ್ಟ ಮೊದಲ ಪರಮಾಣು  ಪರೀಕ್ಷೆಯನ್ನು ಪೋಖ್ರಾನ್ ನಲ್ಲಿ ರಹಸ್ಯವಾಗಿ ನಡೆಸಿತ್ತು. "ಸ್ಮೈಲಿಂಗ್ ಬುದ್ಧ" ಎನ್ನುವ ರಹಸ್ಯ ಹೆಸರಲ್ಲಿ ಮಾಜಿ ರಾಷ್ಟ್ರಪತಿ ಮತ್ತು ಖ್ಯಾತ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಸಾರಥ್ಯದಲ್ಲಿ  ಪರಮಾಣು ಪರೀಕ್ಷೆಯನ್ನು ನಡೆಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com