ನವದೆಹಲಿ: ಬಿಜೆಪಿ ನಿರ್ಣಾಯಕ ಸರ್ಕಾರವನ್ನು ನೀಡಿದೆ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಮೋದಿ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ, ಬಿಜೆಪಿ ನಿರ್ಣಾಯಕ ಸರ್ಕಾರವನ್ನು ನೀಡಿದ್ದು, ಮುಂದಿನ ಮೂರು ವರ್ಷದಲ್ಲಿ 2014ರ ಲೋಕಸಭೆ ಚುನಾವಣೆ ವೇಳೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಆರ್ಥಿಕತೆಯನ್ನು ಉತ್ತೇಜಿಸಿದ್ದು, ಉದ್ಯೋಗ ಸೃಷ್ಟಿಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಬಹು ದಿನಗಳ ನಂತರ ಮೋದಿ ನೇತೃತ್ವದ ನಿರ್ಣಾಯಕ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಆರ್ಥಿಕ ಅಭಿವೃದ್ಧಿಗೆ ಸರ್ಕಾರ ದುಡಿಯಲಿದ್ದು, ಜನರ ಆಶಯಗಳನ್ನು ಸರ್ಕಾರ ಈಡೇರಿಸಲಿದೆ. ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡಯ್ಯಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಅಮಿತ್ ಶಾ, ಯುಪಿಎ ಅಧಿಕಾರವಧಿಯಲ್ಲಿ ಹಗರಣ, ಭ್ರಷ್ಟಾಚಾರಗಳು ನಡೆದವು. ಯುಪಿಎ ಸರ್ಕಾರದಿಂದ ಜನ ಬೇಸತ್ತು ಹೋಗಿದ್ದರು. ಯುಪಿಎ ಅಧಿಕಾರದಲ್ಲಿದ್ದಾಗ ಖಾಲಿ ಖಜಾನೆಯಾಗಿದ್ದು, ನೀತಿಗೆ ಪಾರ್ಶ್ವವಾಯು ಬಡಿದಿತ್ತು ಎಂದು ಟೀಕಿಸಿದ್ದಾರೆ.