
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಯಾಗುವಲ್ಲಿ ವಿಳಂಬವಾಗುತ್ತಿರುವುದರಿಂದ ಬೇಸತ್ತ ನಿವೃತ್ತ ಯೋಧನೋರ್ವ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹರ್ಯಾಣ ಮೂಲದ ನಿವೃತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ದೆಹಲಿ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಇದೇ ಒರ್ ಒಪಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರಾಮ್ ಕಿಶನ್ ಗ್ರೆವಾಲ್ ಅವರು ಯೋಧರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಂದು ಪ್ರತಿಭಟನೆಗೆ ಮಣಿದಿದ್ದ ಕೇಂದ್ರ ಸರ್ಕಾರ ಕೆಲ ಮಹತ್ತರ ಬದಲಾವಣೆ ಮಾಡಿ ಯೋಜನೆ ಜಾರಿ ಮಾಡುವುದಾಗಿ ತಿಳಿಸಿತ್ತು.
ಆದರೆ ಯೋಜನೆ ಜಾರಿಯಾಗುವಲ್ಲಿ ವಿಳಬಂವಾಗುತ್ತಿರುವದರಿಂದ ಬೇಸತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ನಿನ್ನೆ ತಮ್ಮ ದೆಹಲಿ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಆತ್ಮಹತ್ಯೆ ಕುರಿತಂತೆ ಡೆತ್ ನೋಟ್ ಬರೆದಿರುವ ರಾಮ್ ಕಿಶನ್ ಗ್ರೆವಾಲ್ ಅವರು, ನನಗಿಂತಲೂ ಕೆಳಮಟ್ಟದ ಅಧಿಕಾರಿಗಳು ಹೆಚ್ಚು ಪೆನ್ಷನ್ ಪಡೆಯುತ್ತಿದ್ದಾರೆ. ಆದರೆ ನಾನು ಮಾತ್ರ ಅದೇ ಹಳೆಯ ನಿಯಮಾನುಸಾರ ಕಡಿಮೆ ಪೆನ್ಶನ್ ಪಡೆಯುತ್ತಿದ್ದೇನೆ. ಕೇಂದ್ರ ಸರ್ಕಾರ ಭರವಸೆ ನೀಡಿತ್ತಾದರೂ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ನನ್ನ ಸಾವಿನ ಬಳಿಕವಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿ ರಾಮ್ ಕಿಶನ್ ಗ್ರೆವಾಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಈ ಬಗ್ಗೆ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, "ಸರ್ಕಾರ ಕೊಟ್ಟ ಮಾತಿನಂತೆ ಒರ್ ಒಪಿ ಯೋಜನೆಯ ಮೊದಲ ಕಂತಿನ ಸುಮಾರು 5, 500 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ನಿವೃತ್ತ ಯೋಧರು ಫಲ ಪಡೆಯಲಿದ್ದಾರೆ ಎಂದು ಹೇಳಿದ್ದರು. ಆದರೆ ಅಷ್ಟರಲ್ಲೇ ನಿವೃತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
Advertisement