ನವದೆಹಲಿ: ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿ ಬೇಹುಗಾರಿಕೆ ಸುಳಿಯಲ್ಲಿ ಸಿಲುಕಿದ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ದೆಹಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಯ ಆರು ಅಧಿಕಾರಿಗಳು ಬುಧವಾರ ಭಾರತ ಬಿಟ್ಟು ಸ್ವದೇಶಕ್ಕೆ ಮರಳಿದ್ದಾರೆ.
ಒಟ್ಟು ಎಷ್ಟು ಅಧಿಕಾರಿಗಳು ಭಾರತ ತೊರೆದಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಪಾಕ್ ಹೈಕಮಿಷನ್ ಮೂಲಗಳ ಪ್ರಕಾರ, ಆರು ಅಧಿಕಾರಿಗಳು ದೆಹಲಿಯಿಂದ ಸ್ವದೇಶಕ್ಕೆ ಮರಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಕೆಲಸ ಮಾಡುವುದು ಸೂಕ್ತವಲ್ಲ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತದ ಅಧಿಕಾರಿಗಳು ನಮಗೆ ಬೆದರಿಕೆ ಹಾಕುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿದ್ದು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಆರೋಪಿಸಿರುವುದಾಗಿ ಮೂಲಗಳು ತಿಳಿಸಿವೆ,
ಪಾಕ್ ರಾಯಭಾರ ಕಚೇರಿಯ ವಾಣಿಜ್ಯ ಕೌನ್ಸಿಲರ್ ಸೈಯಿದ್ ಫಾರುಖ್ ಹಬಿಬ್ ಮತ್ತು ಕಾರ್ಯದರ್ಶಿಗಳಾದ ಖಾದಿಮ್ ಹುಸೇನ್, ಮುದಸ್ಸಿರ್ ಚೀಮಾ ಹಾಗೂ ಶಾಹೀದ್ ಇಖ್ಬಾಲ್ ಅವರು ಪಾಕಿಸ್ತಾನಕ್ಕೆ ಮರಳಿದ್ದಾರೆ ಎನ್ನಲಾಗಿದೆ.
ಬೇಹುಗಾರಿಕೆ ಆರೋಪದ ಮೇಲೆ ಪಾಕ್ ರಾಯಭಾರಿ ಕಚೇರಿಯ ಬಂಧಿತ ಮೊಹಮದ್ ಅಖ್ತರ್ ಉಚ್ಛಾಟನೆಗೊಂಡ ಬೆನ್ನಲ್ಲೇ ಪಾಕಿಸ್ತಾನ ಇನ್ನೂ ಆರು ಅಧಿಕಾರಿಗಳನ್ನು ಭಾರತದಿಂದ ವಾಪಸ್ ಕರೆಸಿಕೊಂಡಿದೆ.