
ನವದೆಹಲಿ: ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಕಿಶನ್ ಅವರ ಆತ್ಮಹತ್ಯೆ ಪ್ರಕರಣ ಒಆರ್‌ಒಪಿಗೆ ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಗ್ರೆವಾಲ್ ಅವರು ಸಾವು ದುರಾದೃಷ್ಟಕರ. ಕಿಶನ್ ಅವರ ಸಾವಿನ ಹಿಂದೆ ಸಾಕಷ್ಟು ಸಂಶಯಗಳು ಮೂಡತೊಡಗಿದ್ದು, ಈ ಬಗ್ಗೆ ಸೂಕ್ತ ರೀತಿಯ ತನಿಖೆ ನಡೆಸುವ ಅಗತ್ಯವಿದೆ ಎಂದಿದ್ದಾರೆ.
ರಾಮ್ ಕಿಶನ್ ಅವರು ಸಮಸ್ಯೆಯನ್ನು ಹಿಡಿದು ಸರ್ಕಾರದ ಬಳಿ ಬಂದಿದ್ದರೆ, ನಾವು ಅವರಿಗೆ ಸಹಾಯವನ್ನೇ ಮಾಡದಿದ್ದರೆ, ಇದರಲ್ಲಿ ನಮ್ಮ ತಪ್ಪಿದೆ ಎಂದು ಹೇಳಬಹುದಿತ್ತು. ಆದರೆ, ಇದಾವುದೂ ನಡೆದಿಲ್ಲ. ಬ್ಯಾಂಕಿನೊಂದಿಗೆ ಕಿಶನ್ ಅವರ ಸಮಸ್ಯೆ ಇತ್ತೇ ವಿನಃ ಒಆರ್'ಒಪಿ ಕುರಿತಾಗಿ ಇರಲಿಲ್ಲ. ರಾಮ್ ಕಿಶನ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಪಂಚಾಯಿತಿ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಕಿಶನ್ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.
ಹರ್ಯಾಣ ಮೂಲದ ನಿವೃತ್ತ ಯೋಧ ರಾಮ್ ಕಿಶನ್ ಗ್ರೆವಾಲ್ ಅವರು ನಿನ್ನೆಯಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ತಮ್ಮ ಪುತ್ರನಿಗೆ ಕರೆ ಮಾಡಿದ್ದ ಕಿಶನ್ ಅವರು, ನಾನು ಇಂಡಿಯಾ ಗೇಟ್ ಬಳಿ ಕುಳಿತಿದ್ದು, ವಿಷವನ್ನು ಕುಡಿಯುತ್ತಿದ್ದೇನೆ. ಸರ್ಕಾರ ಯೋಧರಿಗೆ ಅನ್ಯಾಯವನ್ನು ಮಾಡುತ್ತಿದ್ದು, ಇದನ್ನು ಸಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ತತ್ವಗಳು ಹಾಗೂ ನಿಯಮಗಳನ್ನು ಪಾಲಿಸುವ ವ್ಯಕ್ತಿ ನಾನಾಗಿದ್ದು, ನನ್ನ ಜೀವವನ್ನು ನನ್ನ ಕುಟುಂಬ, ಮಾಜಿ ಯೋಧರು ಹಾಗೂ ದೇಶಕ್ಕಾಗಿ ತ್ಯಾಗ ಮಾಡುತ್ತಿದ್ದೇನೆಂದು ಹೇಳಿಕೊಂಡಿದ್ದರು.
ಮಾಜಿ ಯೋಧ ಕಿಶನ್ ಅವರ ಆತ್ಮಹತ್ಯೆ ಕುರಿತಂತೆ ನಿನ್ನೆಯಷ್ಟೇ ವಿ.ಕೆ ಸಿಂಗ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ರಾಮ್ ಕಿಶನ್ ಅವರ ಆತ್ಮಹತ್ಯೆಗೆ ಒಆರ್ ಒಪಿ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಕಿಶನ್ ಅವರ ಮಾನಸಿಕ ಸ್ಥಿತಿ ಬಗ್ಗೆ ಸಂದೇಹಗಳಿದ್ದು, ಮಾನಸಿಕ ಸ್ಥಿತಿಯ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಹೇಳಿದ್ದರು.
ವಿ.ಕೆ. ಸಿಂಗ್ ಅವರು ಈ ಹೇಳಿಕೆಗೆ ವ್ಯಾಪಕ ಟೀಕೆಗಳು ಹಾಗೂ ಖಂಡನೆಗಳು ವ್ಯಕ್ತವಾಗಿದ್ದವು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಿಕೆ.ಸಿಂಗ್ ಅವರ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದರು.
Advertisement