ದೆಹಲಿಯಲ್ಲಿ ಇಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು
ದೆಹಲಿಯಲ್ಲಿ ಇಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

ನಜೀಬ್ ಅಹ್ಮದ್ ಕಾಣೆ ಪ್ರಕರಣ: ಪ್ರತಿಭಟನೆ ನಡೆಸುತ್ತಿದ್ದ ನಜೀಬ್ ತಾಯಿ, ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು

ಅಕ್ಟೋಬರ್ 15ರಿಂದ ಕಾಣೆಯಾದ ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದಲ್ಲಿ ಪೊಲೀಸರ ವೈಫಲ್ಯ...
ನವದೆಹಲಿ: ಅಕ್ಟೋಬರ್ 15ರಿಂದ ಕಾಣೆಯಾದ ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಖಂಡಿಸಿ ಇಂಡಿಯಾ ಗೇಟ್ ಬಳಿ ಪ್ರತಿಭಟನೆಗೆಂದು ಸಾಗುತ್ತಿದ್ದ ವೇಳೆ ಸುಮಾರು 200 ಮಂದಿ ಜವಾಹರ ಲಾಲ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ನಜೀಬ್ ಅಹ್ಮದ್ ನ ತಾಯಿಯನ್ನು ಪೊಲೀಸರು ಬಂಧಿಸಿದರು.
ಪೊಲೀಸರು ನಜೀಬ್ ನ ತಾಯಿ ಫಾತಿಮಾರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರಲ್ಲಿ ಒಬ್ಬರಾದ ಶಾಹಿದ್ ರಾಜ ತಿಳಿಸಿದ್ದಾರೆ. ಬಂಧಿತರನ್ನು ನಂತರ ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
''ಪೊಲೀಸರು ನಮ್ಮನ್ನು ಇಂಡಿಯಾ ಗೇಟ್ ದಾರಿಯಲ್ಲಿ ಬಂಧಿಸಿದ್ದಾರೆ. ಅವರು ನಜೀಬ್ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಆಟೋ ರಿಕ್ಷಾ ಚಲಾಯಿಸುತ್ತಿದ್ದಾಗ ಅವರನ್ನು ಪುರುಷ ಪೊಲೀಸರು ಬಂಧಿಸಿದರು. ಅವರನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಬಂಧಿಸಲಿಲ್ಲ ಎಂದು ರಾಜಾ ಸುದ್ದಿ ಸಂಸ್ಥೆಗೆ ತಿಳಿಸಿದರು.
ನಜೀಬ್ ನ ತಾಯಿಯನ್ನು ಪೊಲೀಸರು ಎಳೆದುಕೊಂಡು ಹೋದರು. ಈ ದೇಶದಲ್ಲಿ ಕಾಣೆಯಾದ ಮಗನಿಗಾಗಿ ಸಾರ್ವಜನಿಕವಾಗಿ ಪ್ರತಿಭಟಿಸುವ ಅಧಿಕಾರ ತಾಯಿಗಿಲ್ಲವೇ ಎಂದು ಪ್ರತೀಕ್ ಸಿನ್ಹಾ ಎಂಬುವವರು ಟ್ವೀಟ್ ಮಾಡಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೂ ಮುನ್ನ ಅವರನ್ನು ಭೇಟಿ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಹೆದರುವುದೇಕೆ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳಿಗೆ ಹೆದರುವುದು ಏಕೆ ಎಂದು ನಾನು ಪ್ರಧಾನಿಯವರನ್ನು ಕೇಳಲು ಬಯಸುತ್ತೇನೆ ಎಂದು ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ನೀವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ತಡೆದರೆ ಇನ್ನಷ್ಟು ಪ್ರತಿಭಟನೆಯನ್ನು ಎದುರಿಸುತ್ತೀರಿ. ನಾನು ನಿಮಗೆ ಹಲವು ಬಾರಿ ಹೇಳಿದ್ದೇನೆ ಮೋದಿಯವರೇ, ವಿದ್ಯಾರ್ಥಿಗಳ ಜೊತೆ ಅವ್ಯವಸ್ಥೆ ಮಾಡಿಕೊಳ್ಳಬೇಡಿ'' ಎಂದು ಟ್ವೀಟ್ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com