
ನವದೆಹಲಿ: 500 ಮತ್ತು 1000 ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ಕಪ್ಪುಹಣದದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮೋದಿ ನಿರ್ಧಾರವನ್ನು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಶ್ಲಾಘಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು, ಭ್ರಷ್ಟಾಚಾರ ಮತ್ತು ಕಪ್ಪು ಹಣ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕಠಿಣ ನಿಲುವು ತಳೆದಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಮೋದಿ ನಿರ್ಧಾರದ ಹಿಂದೆ ತಮ್ಮ ಸಲಹೆ ಕೂಡ ಕೆಲಸ ಮಾಡಿದೆ ಎಂದು ಹೇಳಿರುವ ನಾಯ್ಡು ಗರಿಷ್ಠ ಮೊತ್ತದ ನೋಟ್ ಗಳನ್ನು ನಿಷೇಧಿಸುವಂತೆ ತಾವು ಈ ಹಿಂದೆ ಸಲಹೆ ನೀಡಿದ್ದಾಗಿಯೂ ತಮ್ಮ ಸಲಹೆಯನ್ನು ಬಳಕೆ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುವುದಾಗಿ ನಾಯ್ಡು ಹೇಳಿದ್ದಾರೆ.
ಗರಿಷ್ಠ ಮೊತ್ತದ ನೋಟುಗಳನ್ನು ನಿಷೇಧಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದ ನಾಯ್ಡು !
ಚಂದ್ರಬಾಬು ನಾಯ್ಡು ಹಾಗೂ ಪ್ರತಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ಅವರ ನಡುವೆ ಕಪ್ಪುಹಣ ಸಂಬಂಧ ವಿವಾದ ತಾರಕಕ್ಕೇರಿದ್ದ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಕಾಳಧನಿಕರಿಂದ ಕಪ್ಪುಹಣವನ್ನು ಶೇಖರಿಸುವ ಕೆಲಸಕ್ಕೆ ಮುಂದಾಗಿತ್ತು. ಅಲ್ಲದೆ ಪ್ರತಿಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಬಾಬು ಅವರು ಕಪ್ಪುಹಣ ಹೊಂದಿದ್ದಾರೆ ಎಂದು ಟೀಕಿಸಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿದ್ದ ನಾಯ್ಡು ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ಕಪ್ಪುಹಣ ಹಾಗೂ ಭ್ರಷ್ಟಾಚಾರವನ್ನು ಉಲ್ಲೇಖಿಸಿದ್ದ ನಾಯ್ಡು ದೊಡ್ಡ ಪ್ರಮಾಣದ ನಗದಿನ ನೋಟುಗಳನ್ನು ರದ್ದು ಮಾಡುವಂತೆ ಆಗ್ರಹಿಸಿದ್ದರು.
ಈ ವೇಳೆ ಆಂಧ್ರ ಪ್ರದೇಶದ ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ್ದ ನಾಯ್ಡು "ರಾಜ್ಯದಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದ್ದು, ಆಂಧ್ರ ಪ್ರದೇಶದ ಹೈದರಾಬಾದ್ ಮೂಲದ ಓರ್ವ ಉಧ್ಯಮಿಯಿಂದಲೇ ಸುಮಾರು 10 ರಿಂದ 13 ಸಾವಿರ ಕೋಟಿ ರು. ಕಪ್ಪುಹಣ ಚುನಾವಣೆಯಲ್ಲಿ ಹರಿದಾಡಿತ್ತು ಎಂದು ಪತ್ರದಲ್ಲಿ ಹೇಳಿದ್ದರು" ಎಂದು ತಿಳಿದುಬಂದಿದೆ.
ಇಂತಹುದೇ ಆಲೋಚನೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಏಕಾಏಕಿ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದಾರೆ.
Advertisement