
ನವದೆಹಲಿ: 500 ಹಾಗೂ 1000 ರು. ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವಕೀಲರೊಬ್ಬರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ನಿರ್ಧಾರದಿಂದ ದೇಶದ ಜನತೆಗೆ ಸಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕೂಡಲೇ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯುವಂತೆ ಸೂಚಿಸಬೇಕು ಎಂದು ಹೇಳಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
"ದೇಶದಲ್ಲಿನ ಅಕ್ರಮ ಕಪ್ಪುಹಣವನ್ನು ಮತ್ತು ನಕಲಿ ನೋಟುಗಳ ಹಾವಳಿ ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೋಟುಗಳನ್ನು ನಿಷೇಧಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ತಮ್ಮ ಈ ನಿರ್ಧಾರಕ್ಕೆ ಅವರು ಯಾವುದೇ ರೀತಿಯ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಅಲ್ಲದೆ ಜನತೆಗೆ ಯಾವುದೇ ರೀತಿಯ ಕಾಲಾವಕಾಶ ಕೂಡ ನೀಡಿಲ್ಲ. ಇದರಿಂದ ಜನತೆ ತೀವ್ರ ಕಂಗಾಲಾಗಿದ್ದು, ನಿತ್ಯ ವ್ಯವಹಾರಗಳ ವ್ಯತಿರಿಕ್ತಿ ಪರಿಣಾಮ ಬೀರುತ್ತಿದೆ. ದೇಶದ ಆರ್ಥಿಕತೆ ಮೇಲೂ ಆದೇಶ ದುಷ್ಪರಿಣಾಮ ಬೀರುತ್ತಿದ್ದು, ಷೇರುಮಾರುಕಟ್ಟೆ ಕುಸಿದಿದೆ. ಹೀಗಾಗಿ ಕೂಡಲೇ ಆದೇಶವನ್ನು ಸರ್ಕಾರ ಹಿಂಪಡೆಯುವಂತೆ ಸೂಚನೆ ನೀಡಬೇಕು ಎಂದು ಹೇಳಿ ವಕೀಲರು ಆರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಪ್ರಸ್ತುತ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿರುವ ನ್ಯಾಯಾಲಯ ಮಂಗಳವಾರಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ,
Advertisement