ಪಾಟ್ನಾ: 500, 1000 ರೂ ನೋಟುಗಳು ಬಂದ್ ಆಗಿದ್ದು, ಹೊಸ ನೋಟುಗಳು ಸಿಗದೇ ಪರದಾಡುತ್ತಿರುವ ಜನರ ಆಕ್ರೋಶ ಹೆಚ್ಚಿದೆ. ಇದಕ್ಕೆ ಉತ್ತಮ ಉದಾಹರಣೆಯಾಗಬಲ್ಲ ಘಟನೆ ಬಿಹಾರದಲ್ಲಿ ನಡೆದಿದ್ದು, ಒಂದಷ್ಟು ಜನರ ಗುಂಪು ಬ್ಯಾಂಕ್ ಗೇಟ್ ಗೆ ಹಾಕಲಾಗಿದ್ದ ಬೀಗ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ.
ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ನೋಟುಗಳ ಬದಲಾವಣೆ ಸಾಧ್ಯವಾಗದೇ ಇದ್ದ ಘಟನೆಗಳೂ ನಡೆದಿದ್ದು, ಹಲವೆಡೆ ಅನಾನುಕೂಲದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬಿಹಾರದ ಗೋಪಾಲ್ ಗಂಜ್ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನಗದು ಖಾಲಿಯಾಗಿದ್ದು, ನೋಟುಗಳ ಬದಲಾವಣೆ ಸಾಧ್ಯವಾಗುವುದಿಲ್ಲ ಎಂದಿದ್ದಕ್ಕಾಗಿ ಆಕ್ರೋಶಗೊಂಡ ಜನತೆ ಗೇಟ್ ಗೆ ಹಾಕಲಾಗಿದ್ದ ಬೀಗವನ್ನು ಮುರಿದು ಒಳಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯದ ಔರಂಗಾಬಾದ್, ಮುಜಾಫರ್ ಪುರ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆದಿದೆ.