ಮೋದಿ ನೇ ಕ್ಯಾ ಕಿಯಾ...ಎನ್ನುವವರು ನ.8ರ ರಾತ್ರಿ ವಿಡಿಯೋ ನೋಡಿ: ಪ್ರಧಾನಿ ಮೋದಿ

ಕೆಎಲ್ಇ ಸಂಸ್ಥೆಯ ಶತಮಾನೋತ್ವವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಗೆ ಭೇಟಿ ನೀಡಿದ್ದು, ಕನ್ನಡದಲ್ಲಿಯೇ ತಮ್ಮ ಭಾಷಣವನ್ನು ಆರಂಭಿಸಿದ್ದಾರೆ...
ಕೆಎಲ್ಇ  ಶತಮಾನೋತ್ಸವ ಸಮಾರಂಭ: ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ
ಕೆಎಲ್ಇ ಶತಮಾನೋತ್ಸವ ಸಮಾರಂಭ: ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

ಬೆಳಗಾವಿ: ಕೆಎಲ್ಇ ಸಂಸ್ಥೆಯ ಶತಮಾನೋತ್ವವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಗೆ ಭೇಟಿ ನೀಡಿದ್ದು, ಕನ್ನಡದಲ್ಲಿಯೇ ತಮ್ಮ ಭಾಷಣವನ್ನು ಆರಂಭಿಸಿದ್ದಾರೆ.

ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೆಎಲ್ ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಯ ಪ್ರೀತಿ ಬಂಧು ಭಗಿನಿಯರೆ ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ತಮ್ಮ ಭಾಷಣವನ್ನು ಆರಂಭಿಸಿದರು.

ಉತ್ತಮ ಶಿಕ್ಷಕರು ಹಲವರಿರುತ್ತಾರೆ ಆದರೆ, ಅಮರ ಶಿಕ್ಷಕರು ಕೆಲವರು ಮಾತ್ರ ಇರುತ್ತಾರೆ. ಸಪ್ತ ಋುಷಿಗಳು ಇಂತಹ ಅಮರ ಶಿಕ್ಷಕರಾಗಿರುತ್ತಾರೆ. ಲೋಕಮಾನ್ಯ ತಿಲಕ್ ಹಾಗೂ ಕ್ರಾಂತಿಯೋಗಿ ಬಸವಣ್ಣ ಅವರ ಸ್ಫೂರ್ತಿಯಿಂದ ಕೆಎಲ್ ಇ ಆರಂಭವಾಗಿದೆ. ಇಂದು ದೇಶದ ಮೂಲೆ ಮೂಲೆಯಲ್ಲಿಯೂ ಕೆಎಲ್ ಇ ವಿದ್ಯಾರ್ಥಿಗಳಿದ್ದಾರೆ. ಯಾವುದೇ ಸಂದರ್ಶದಲ್ಲಿ ಭಾಗಿಯಾದರೂ ವಿದ್ಯಾರ್ಥಿಗಳು ಹೆಮ್ಮೆಯಿಂದ ಕೆಎಲ್ ಇ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸವವರಿಗೆ ಕೆಎಲ್ ಇ ಸ್ಫೂರ್ತಿಯಾಗಿದೆ. ದೇಶದ ಅಭಿವೃದ್ಧಿಗಾಗಿ ಕೆಎಲ್ ಇ ಮತ್ತಷ್ಟು ಕೊಡುಗೆಯನ್ನು ನೀಡಬೇಕಿದೆ ಎಂದಿದ್ದಾರೆ.

ನಂತರ ದುಬಾರಿ ನೋಟಿನ ಮೇಲೆ ನಿಷೇಧ ಹೇರಿರುವ ಕುರಿತಂತೆ ಮಾತನಾಡಿದ ಅವರು, ರು.500 ಹಾಗೂ 1,000 ನೋಟಿನ ಮೇಲೆ ನಿಷೇಧ ಹೇರಿರುವುದರಿಂದ ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಕೊಡಿ. ಜನರ ಕಷ್ಟ ನನಗೆ ಅರ್ಥವಾಗುತ್ತಿದೆ. ನಿಮ್ಮ ವಿಶ್ವಾಸ ಗಳಿಸುವ ಕೆಲಸವನ್ನು ನಾನು ಮಾಡಿದ್ದೇನೆ.

ಕೆಲ ವರ್ಷಗಳ ಹಿಂದಿದ್ದ ಸರ್ಕಾರ ನಾಲ್ಕಾಣೆ ಮೇಲೆ ನಿಷೇಧವನ್ನು ಹೇರಿತ್ತು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವೆಯೇ?...ಅಂದಿನ ಸರ್ಕಾರಕ್ಕೆ ದೊಡ್ಡ ನೋಟಿನ ಮೇಲೆ ನಿಷೇಧ ಹೇರುವ ಧೈರ್ಯವಿರಲಿಲ್ಲ. ಆ ಧೈರ್ಯವನ್ನು ನಾವು ಮಾಡಿದ್ದೇವೆ. ನ.8 ರ ರಾತ್ರಿ ಬಡವರು ನಿಶ್ಚಿಂತೆಯಿಂದ ನಿದ್ರೆ ಮಾಡಿದ್ದರು. ಭ್ರಷ್ಟ ಶ್ರೀಮಂತರ ನಿದ್ರೆ ಅಂದು ಹಾಳಾಗಿತ್ತು. ನಿದ್ರೆ ಮಾತ್ರೆ ತೆಗೆದುಕೊಳ್ಳಲು ಹೋದರೂ ಅವರಿಗೆ ಮಾತ್ರೆ ಸಿಗಲಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಹೆಸರನ್ನು ಹೇಳದೆಯೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಟಾಂಗ್ ನೀಡಿದ ಪ್ರಧಾನಿ ಮೋದಿ, ಈ ಹಿಂದೆ ಟಿವಿ ಹಾಕುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಹಗರಣಗಳ ಸುದ್ದಿಗಳನ್ನೇ ಕೇಳುತ್ತಿದ್ದ ಸಾರ್ವಜನಿಕರಿಗೆ, ಇಂದು ಅಧಿಕಾರಿಗಳೂ ಕೂಡ ಸಾಲಿನಲ್ಲಿ ನಿಂತು ದುಡ್ಡು ಪಡೆಯುವಂತಹ ದೃಶ್ಯಗಳನ್ನು ನೋಡುವಂತಾಗಿದೆ. ಮೋದಿ ನೇ ಕ್ಯಾ ಕಿಯಾ...ಮೋದಿ ನೇ ಕ್ಯಾ ಕಿಯಾ...ಎಂದು ಪ್ರಶ್ನಿಸುವವರು ನವೆಂಬರ್ 8ರ ರಾತ್ರಿಯ ಟವಿ ವಿಡಿಯೋಗಳನ್ನು ನೋಡಲಿ. ಅಂತಹವರಿಗೆ ಉತ್ತರ ಸಿಗುತ್ತದೆ. ಇಂದು ನಾಯಕರೂ ಕೂಡ ಸಾಲಿನಲ್ಲಿ ನಿಂತೂ ರು.4000 ಹಣವನ್ನು ಪಡೆಯುವಂತಾಗಿದೆ ಎಂದು ಹೇಳಿದರು.

70 ವರ್ಷಗಳ ಕಾಲ ದೇಶವನ್ನು ಭಾರೀ ಲೂಟಿ ಮಾಡಲಾಗಿದೆ. ದೇಶದಲ್ಲಿರುವ 70 ವರ್ಷದ ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸಲು ನನಗೆ 50 ದಿನವಾದರೂ ಬೇಡವೇ, ದೇಶದಲ್ಲಿ ಮಾಡಿರುವ ಲೂಟಿಯನ್ನು ಸ್ವಚ್ಛಗೊಳಿಸಲು ನನಗೆ 70 ತಿಂಗಳು ಕೊಡಿ ಸ್ವಚ್ಛ ಮಾಡಿ ತೋರಿಸುತ್ತೇನೆ. ನನ್ನ ಪ್ರಾಮಾಣಿಕತೆಯ ಮೇಲೆ ನಿಮಗೆ ನಂಬಿಕೆಯಿದ್ದರೆ ಎದ್ದು ನಿಂತು ನಿಮ್ಮ ಚಪ್ಪಾಳೆಗಳ ಮೂಲಕ ನನಗೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು

ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಆಪಾರ ಸಂಖ್ಯೆಯ ಜನರು, ವಿದ್ಯಾರ್ಥಿಗಳು ಎದ್ದು ನಿಂತು ಧೀರ್ಘ ಕರತಾಡನ ಮಾಡಿದರು. ಇದೇ ವೇಳೆ ಮೋದಿಯವರ ಎದುರಿನ ಸಾಲಿನಲ್ಲಿ ಕುಳಿತಿದ್ದ ಪತ್ರಕರ್ತರೂ ಕೂಡ ಎದ್ದು ನಿಂತು ಕರತಾಡನ ಮಾಡಿದರು. ಇದನ್ನು ಕಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದೂ ನಿಲ್ಲದ ಪತ್ರಕರ್ತರೂ ಕೂಡ ಎದ್ದು ನಿಂತಿದ್ದಾರೆ. ಅವರಿಗೆ ನನ್ನ ನಮನಗಳು ಎಂದರು.

ಇದೇ ವೇಳೆ ಬ್ಯಾಂಕ್ ಸಿಬ್ಬಂದಿಗಳ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಅವರು, ಕೇಂದ್ರ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡ ಬಳಿಕ ಬ್ಯಾಂಕ್ ಸಿಬ್ಬಂದಿಗಳು ರಜೆ ಇಲ್ಲದೆಯೇ ತಮ್ಮ ಕೆಲಸದ ಸಮಯವನ್ನು ಹೆಚ್ಚಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳ ಕೆಲಸವನ್ನು ಪ್ರಶಂಸಿಸಲೇಬೇಕು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com