ಸಮುದ್ರದಲ್ಲೇ ಮೀನುಗಾರಿಕಾ ಬೋಟ್ ಗೆ ಬೆಂಕಿ; 1 ಸಾವು. ನಾಲ್ವರ ರಕ್ಷಣೆ

ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿರುವಾಗಲೇ ಬೋಟ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಮೀನುಗಾರ ಸಾವಿಗೀಡಾದ ಭೀಕರ ಘಟನೆ ಗುಜರಾತ್ ಕರಾವಳಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಹ್ಮದಾಬಾದ್: ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿರುವಾಗಲೇ ಬೋಟ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಮೀನುಗಾರ ಸಾವಿಗೀಡಾದ ಭೀಕರ ಘಟನೆ ಗುಜರಾತ್ ಕರಾವಳಿಯಲ್ಲಿ ನಡೆದಿದೆ.

ಗುಜರಾತ್ ನ ಪೋರ್ ಬಂದರ್ ಸಮೀಪ ಅರೇಬಿಯನ್ ಸಮುದ್ರದಲ್ಲಿ ಈ ಘಟನೆ ನಡೆದಿದ್ದು, ಕೃಷ್ಣರಾಜ್ ಎಂಬ ಮೀನುಗಾರಿಕಾ ಬೋಟ್ ಮೀನು ಹಿಡಿಯುವುದರಲ್ಲಿ ತೊಡಗಿದ್ದಾಗ ದಿಢೀರನೇ ಬೋಟ್ ಗೆ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆ ಓರ್ವ ಮೀನುಗಾರ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಭಾರತೀಯ ನೌಕಾದಳ (ಇಂಡಿಯನ್ ಕೋಸ್ಟಲ್ ಗಾರ್ಡ್ಸ್-ಐಸಿಜಿ) ಬೋಟ್ ನಲ್ಲಿ ಇತರೆ ನಾಲ್ವರನ್ನು  ರಕ್ಷಿಸಿದ್ದಾರೆ.

ನೌಕಾಪಡೆಯ ಆರುಷ್ ಎಂಬ ಬೋಟ್ ಮೂಲಕ ಯೋಧರು ತುರ್ತಾಗಿ ತೆರಳಿದ್ದು, ಆಪಾಯದಲ್ಲಿ ಸಿಲುಕಿದ್ದ ನಾಲ್ಕು ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ. ಪೋರ್ ಬಂದರ್ ನಿಂದ ದುರಂತಕ್ಕೀಡಾದ ಬೋಟ್ ಸುಮಾರು 14  ನಾಟಿಕಲ್ ಮೈಲು ದೂರದಲ್ಲಿತ್ತು ಎಂದು ಕರಾವಳಿ ಭದ್ರತಾ ಪಡೆ ಮಾಹಿತಿ ನೀಡಿದೆ.ರಕ್ಷಣಾ ಕಾರ್ಯಾಚರಣೆಗೆ ಅಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಇತರೆ ಬೋಟ್ ಗಳು ಸಾಥ್ ನೀಡಿದವು ಎಂದು ತಿಳಿದುಬಂದಿದೆ. ನಾಲ್ವರ ಪೈಕಿ  ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ದುರಂತಕ್ಕೀಡಾದ ಬೋಟ್ ಅನ್ನು ದಿಕ್ಸಾ ಎಂಬ ಟೋಯಿಂಗ್ ಬೋಟ್ ಮೂಲಕ ದಡಕ್ಕೆ ಎಳೆದು ತರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com