ನೋಟು ನಿಷೇಧ: ಪ್ರಧಾನಿ ಮೋದಿ ವಿರುದ್ಧ ಕೈ ಜೋಡಿಸಿದ ವಿರೋಧ ಪಕ್ಷಗಳು
ನವದೆಹಲಿ: ದುಬಾರಿ ನೋಟಿನ ಮೇಲೆ ನಿಷೇಧ ಹೇರಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಕೇಂದ್ರ ವಿರುದ್ಧ ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ಮುಂದಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಐಕ್ಯತೆ ಪ್ರದರ್ಶಿಸಿ ಸಂಸತ್ತಿನ ಮುಂದೆ ಮಾನವ ಸರಪಳಿ ನಿರ್ಮಿಸಿ ಬುಧವಾರ ಪ್ರತಿಭಟನೆ ನಡೆಸುತ್ತಿದೆ.
ಸಂಸತ್ತಿನ ಮುಂದಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲು ಮುಂದಾಗಿರುವ ವಿರೋಧ ಪಕ್ಷಗಳು, ಸಂಸತ್ತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಬೇಕೆಂದು ಪಟ್ಟು ಹಿಡಿದಿವೆ.
ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು, ಇಂದು ದೇಶದ ಜನತೆ ಸಾಲಿನಲ್ಲಿ ನಿಂತಿದೆ. ಹೀಗಾಗಿ ನಾವೂ ಕೂಡ ಸಂಸತ್ತಿನ ಮುಂದೆ ಸಾಲುಗಟ್ಟಿ ನಿಂತಿದ್ದೇವೆಂದು ಹೇಳಿದ್ದಾರೆ.
ಸಿಪಿಐ ನಾಯಕ ಡಿ.ರಾಜಾ ಮಾತನಾಡಿ, ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ ನೀಡದಿದ್ದರೆ, ರಾಷ್ಟ್ರಪತಿಗಳ ಬಳಿ ಹೋಗಲಾಗುತ್ತದೆ. ರಾಷ್ಟ್ರಪತಿಗಳೇ ನಮಗೆ ಅಂತಿಮ ಆಯ್ಕೆಯಾಗಿದ್ದಾರೆಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ಕೇಂದ್ರ ಸರ್ಕಾರದ ಕಠಿಣ ನಿರ್ಧಾರದಿಂದಾಗಿ ಈ ವರೆಗೂ 70 ಮಂದಿ ಸಾವನ್ನಪ್ಪಿದ್ದಾರೆ. ಇದು ಸಣ್ಣ ವಿಚಾರವೇ ಎಂದು ಪ್ರಶ್ನಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಡೆರೆಕ್ ಓ ಬ್ರೇನ್, ಜನತಾದಳ (ಸಂಯುಕ್ತ) ಪಕ್ಷದ ನಾಯಕ ಶರದ್ ಯಾದವ್, ಮತ್ತು ಡಿಎಂ ಪಕ್ಷದ ನಾಯಕ ಕನಿಮೋಳಿ ಸೇರಿದಂತೆ 200 ಕ್ಕೂ ಹೆಚ್ಚು ವಿರೋಧ ಪಕ್ಷದ ಸಂಸದರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಸೀಮಿತ ದಾಳಿ ನಡೆಸಲಾಗಿದೆ ಎಂದು ಹೇಳುತ್ತಿದೆ. ಇದು ಸೀಮಿತ ದಾಳಿಯಲ್ಲ, ಸಾಮಾನ್ಯ ಜನರಿಗೆ ಹಾಸಿರುವ ಬಾಂಬ್ ಕಾರ್ಪೆಟ್ ಆಗಿದೆ. ಸಾಮಾನ್ಯ ಜನರ ಮೇಲಿನ ಶೋಷಣೆಯನ್ನು ನಿಲ್ಲಿಸಿ. ಬಡವರನ್ನು ರಕ್ಷಿಸಿ ಎಂದು ಪ್ರತಿಭಟನೆ ವೇಳೆ ನಾಯಕರು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಇದಲ್ಲದೆ, ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಪ್ರತ್ಯೇಕವಾಗಿ ದೆಹಲಿಯ ಜಂತರ್ ಮಂತರ್ ನಲ್ಲೂ ಕೇಂದ್ರದ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿದ್ದು, ಸಾಮಾನ್ಯ ಜನರಿಗೆ ಸಮಸ್ಯೆ ತಂದೊಡ್ಡಿರುವ ನೋಟಿನ ಮೇಲಿನ ನಿಷೇಧ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ