ಹೊಸ ನೋಟುಗಳ ಕೊರತೆಯಿಲ್ಲ, ದೇಶಾದ್ಯಂತ ಹಣ ಸಾಗಣೆಗೆ ಸಮಸ್ಯೆ: ಸುಪ್ರೀಂಗೆ ಕೇಂದ್ರ
ನವದೆಹಲಿ: ಹೊಸದಾಗಿ ಚಲಾವಣೆಗೆ ತಂದಿರುವ ನೋಟುಗಳ ಕೊರತೆಯಿಲ್ಲ, ಆದರೆ, ದೇಶದ ಮೂಲೆ ಮೂಲೆಗಳಿಗೆ ಹಣ ತಲುಪಿಸುವಲ್ಲಿ ಸಮಸ್ಯೆ ಎದುರಾಗಿದೆ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದು ಸಾಮಾನ್ಯ ಜನರ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ನೋಟು ನಿಷೇಧ ಕುರಿತಂತೆ ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದೆ.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿರುವ ಆಟಾರ್ನಿ ಜನರಲ್ ಮುಕುಲ್ ರೊಹ್ಟಗಿ ಅವರು, ದುಬಾರಿ ನೋಟಿನ ಮೇಲೆ ನಿಷೇಧ ಹೇರಿದ ಆರಂಭಿಕ ದಿನಗಳಲ್ಲಿ ಬ್ಯಾಂಕ್ ಗಳು ಹಾಗೂ ಎಟಿಎಂಗಳಲ್ಲಿ ಸಾಕಷ್ಟು ಕ್ಯೂಗಳಿದ್ದವು. ಕಾಲ ಕ್ರಮೇಣ ಕ್ಯೂಗಳು ಕಡಿಮೆಯಾಗ ತೊಡಗಿದೆ. ಮುಂದಿನ 20 ದಿನಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಲಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ನಗದು ರಹಿತ ವಹಿವಾಟು ನಡೆಸುವ ಉದ್ದೇಶದಿಂದ ದುಬಾರಿ ನೋಟಿನ ಮೇಲೆ ನಿಷೇಧ ಹೇರಲಾಗಿತ್ತು. ಕೇಂದ್ರದ ಈ ನಿರ್ಧಾರದಿಂದ ನಗದು ರಹಿತ ವಹಿವಾಟು ನಿಧಾನಗತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ನಿರ್ಧಾರದಿಂದಾಗಿ ಈಗಾಗಲೇ ರು.6 ಲಕ್ಷ ಕೋಟಿ ಹಣ ಕೇಂದ್ರಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ರು..15 ಲಕ್ಷ ಕೋಟಿ ಹಣವನ್ನು ಸರ್ಕಾರ ಸಂಗ್ರಹ ಮಾಡಲಿದೆ.
ನೋಟಿನ ಮೇಲೆ ನಿಷೇಧ ಹೇರಿರುವ ಕುರಿತಂತೆ ಸರ್ಕಾರ ಉನ್ನತ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದರನ್ನು ರಚಿಸಿದೆ. ಈ ಸಮಿತಿ ದೇಶದಲ್ಲಿನ ಎಲ್ಲಾ ಪರಿಸ್ಥಿತಿಯನ್ನು ಅವಲೋಕಿಸಿ ಕೇಂದ್ರಕ್ಕೆ ವರದಿ ಸಲ್ಲಸಲಿದೆ ಎಂದು ಸುಪ್ರೀಂಗೆ ರೊಹ್ಟಗಿ ಅವರು ತಿಳಿಸಿದ್ದಾರೆ.
ವಾದ-ವಿವಾದಗಳನ್ನು ಆಲಿಸಿ ಸುಪ್ರೀಂ ನಂತರ, ನೋಟು ನಿಷೇಧ ಕುರಿತಂತೆ ಸಾಕಷ್ಟು ಅರ್ಜಿಗಳು ದಾಖಲಾಗಿದ್ದು, ಈ ಆರ್ಜಿಗಳನ್ನು ತಿರಸ್ಕರಿಸಲು ನಿರಾಕರಿಸಿದೆ. ಅಲ್ಲದೆ, ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಜಿದಾರರಿಗೂ ನೋಟಿಸ್ ಮಾಡಿದ್ದು, ಸ್ಪಷ್ಟನೆ ನೀಡುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ