
ಪಾಟ್ನಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೇನೆ ಹಾಗೂ ಪ್ರಧಾನಿ ಮೋದಿ ಅವರ ಜೊತೆ ಫೋನಿನಲ್ಲಿ ಸಂಭಾಷಣೆ ನಡೆಸಿದ್ದೇನೆ ಎಂಬ ಹೇಳಿಕೆಗಳೆಲ್ಲಾ ಆಧಾರರಹಿತವಾದದ್ದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪಾಟ್ನಾದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಂತರ ಮಾತನಾಡಿದ ನಿತೀಶ್ ಕುಮಾರ್ ಮೋದಿ ಅವರ ನೋಟು ನಿಷೇಧ ಕ್ರಮಕ್ಕೆ ನಾನು ಬೆಂಬಲ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ನನ್ನ ಕೆಲ ವಿರೋಧಿಗಳು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದೆಲ್ಲಾ ಆಧಾರರಹಿತವಾದದ್ದು ಎಂದು ಸಮರ್ಥಿಸಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇದಿಸಿರುವುಹು ಹುಲಿಯ ಮೇಲೆ ಸವಾರಿ ಮಾಡಿದಂತೆ ಎಂದು ನಿತೀಶ್ ಕುಮಾರ್ ಹೇಳಿಕೆ ನೀಡಿದ್ದರು. ನೋಟು ನಿಷೇಧಕ್ಕೆ ಬೆಂಬಲ ಸೂಚಿಸಿರುವುದಕ್ಕೆ ನಿತೀಶ್ ಕುಮಾರ್ ಅವರಿಗೆ ಧನ್ಯವಾದಗಳು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದರು.
ನಾನು ಭ್ರಷ್ಟಾಚಾರ ವನ್ನು ವಿರೋಧಿಸುತ್ತೇನೆ. ಹಾಗಾಗಿ ಮೋದಿ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೇನೆ, ಅದಕ್ಕೂ ಹೊರತು ಅವರ ಜೊತೆ ಯಾವುದೇ ರಾಜಕೀಯ ಮೈತ್ರಿಗಳು ಇಲ್ಲ ಎಂದು ಕಾರ್ಯಕರ್ತರ ಸಭೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
Advertisement